ಈ ಬಾರಿ ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ, ಯಾವುದೇ ಪಂದ್ಯದಲ್ಲೂ ಸೋಲದೆ ಬಲಿಷ್ಟ ತಂಡವಾಗಿ ಕಾಣಿಸುತ್ತಿದೆ.
ಆದರೆ ಮುಂದಿನ ಹಾದಿ ಖಂಡಿತ ಸುಗಮವಲ್ಲ, ಸುಲಲಿತವೂ ಅಲ್ಲ. ಇದು ಸೆಮಿಫೈನಲ್ ಪ್ರವೇಶಿಸಿದ ನಾಲ್ಕೂ ತಂಡಗಳಿಗೆ ಅನ್ವಯಿಸುವ ಮಾತು. ಸತತ 9 ಪಂದ್ಯಗಳನ್ನು ಗೆದ್ದರೇ ನಂತೆ, ಮುಂದಿನೆರಡೂ ಪಂದ್ಯಗಳನ್ನು ವಶಪಡಿಸಿಕೊಳ್ಳುವುದು ಈ 9 ವಿಜಯಗಳಿಗಿಂತ ಕಠಿನ ಎಂಬ ಅರಿವು ಖಂಡಿತವಾಗಿಯೂ ಭಾರತಕ್ಕಿದೆ.
ಲೀಗ್ನಲ್ಲಿ ಸೋತರೆ ಚೇತರಿಕೆಗೆ ಮಾರ್ಗವೊಂದು ತೆರೆದಿರುತ್ತಿತ್ತು. ಆದರ ನಾಕೌಟ್ ಹಾಗಲ್ಲ, ಇಲ್ಲಿ ಒಂದು ಹೆಜ್ಜೆ ಎಡವಿದರೂ “ಕಪ್’ ಕನಸು ಛಿದ್ರಗೊಳ್ಳುತ್ತದೆ. ಹೀಗಾಗದಿರಲಿ ಎಂಬ ಕೋಟ್ಯಂತರ ಮಂದಿಯ ಹಾರೈಕೆಯೊಂದಿಗೆ ಭಾರತ ತಂಡ ಬುಧವಾರ ಪ್ರಬಲ ನ್ಯೂಜಿಲ್ಯಾಂಡ್ ವಿರುದ್ಧ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಸೆಮಿಫೈನಲ್ ಸೆಣ ಸಾಟಕ್ಕೆ ಇಳಿಯಲಿದೆ.
ಇದು ಭಾರತ-ನ್ಯೂಜಿಲ್ಯಾಂಡ್ ನಡುವಿನ ಸತತ 2ನೇ ವಿಶ್ವಕಪ್ ಸೆಮಿಫೈನಲ್. ನ್ಯೂಜಿಲ್ಯಾಂಡಿಗೆ ಸತತ 5ನೇ ಉಪಾಂತ್ಯ. 2019ರ ಮ್ಯಾಂಚೆಸ್ಟರ್ ಮೇಲಾಟದಲ್ಲಿ ಕಿವೀಸ್ ಪಡೆ ಕೊಹ್ಲಿ ಬಳಗವನ್ನು 18 ರನ್ನುಗಳಿಂದ ಕೆಡವಿ ಕೂಟದಿಂದ ಹೊರದಬ್ಬಿತ್ತು. ಭಾರತದ ಪಾಳೆಯದಲ್ಲಿ ಆ ಸೇಡು ಇನ್ನೂ ಕೊತ ಕೊತ ಕುದಿಯುತ್ತಿದೆ. ಈ ಬಾರಿ ಕೇನ್ ವಿಲಿಯಮ್ಸನ್ ಪಡೆಯನ್ನು ಹೊರದಬ್ಬಿದರೆ ಅಲ್ಲಿಗೆ ಲೆಕ್ಕ ಚುಕ್ತಾ ಆದಂತಾಗುತ್ತದೆ.
ಅನುಮಾನವೇ ಇಲ್ಲ, ಭಾರತ ಈ ಕೂಟದ ಅತ್ಯಂತ ಬಲಿಷ್ಠ ಹಾಗೂ ಅತ್ಯಂತ ಅಪಾಯಕಾರಿ ತಂಡ. ಯಾವ ಎದುರಾಳಿಯನ್ನೂ ಬಿಡುವುದಿಲ್ಲ ಎಂದು ಪಣತೊಟ್ಟಂತೆ ಆಡುತ್ತಿದೆ. ಇದಕ್ಕೆ ನಮ್ಮವರು ದಾಖಲಿಸಿದ ಒಂದೊಂದು ಫಲಿತಾಂಶವೇ ಸಾಕ್ಷಿ. ಯಾವಾಗ ಆಸ್ಟ್ರೇಲಿಯ ಎದುರಿನ ಆರಂಭಿಕ ಪಂದ್ಯದಲ್ಲಿ 2 ರನ್ನಿಗೆ 3 ವಿಕೆಟ್ ಉದುರಿಸಿಕೊಂಡೂ ಗೆದ್ದು ಬಂದಿತೋ, ಆಗಲೇ ಇಡೀ ಕೂಟಕ್ಕಾಗುವಷ್ಟು ಆತ್ಮವಿಶ್ವಾಸವನ್ನು ಗಳಿಸಿಕೊಂಡಿತು.
ಸದ್ಯ ಭಾರತ ತಂಡದಲ್ಲಿ ಯಾವುದೇ ಕೊರತೆ ಇಲ್ಲ. ಫಾರ್ಮ್ ಚಿಂತೆ ಇಲ್ಲ. ಬಲಾಡ್ಯ ಬ್ಯಾಟಿಂಗ್ ಸರದಿ, ಡೇಂಜರಸ್ ಬೌಲಿಂಗ್ ಯೂನಿಟ್ ನಮ್ಮದಾಗಿದೆ. ಇಲ್ಲಿಯ ತನಕ “ಫ್ಯಾಬ್ ಫೋರ್, ಫ್ಯಾಬ್ ಫೈವ್’ ಎಂದೆಲ್ಲ ಭಾರತದ ಬ್ಯಾಟಿಂಗ್ ಸರದಿಯನ್ನು ಹೊಗಳುತ್ತಿದ್ದರು. ಇದೀಗ “ಫ್ಯಾಬ್ ಫೈವ್’ ಎಂಬುದು ನಮ್ಮವರ ಬೌಲಿಂಗ್ ಪಡೆಯ ಟ್ಯಾಗ್ಲೈನ್ ಆಗಿದೆ. ಬುಮ್ರಾ, ಶಮಿ, ಸಿರಾಜ್, ಜಡೇಜ ಮತ್ತು ಕುಲದೀಪ್ ಅವರ ಎಸೆತಗಳನ್ನು ನಿಭಾಯಿಸಿ ನಿಲ್ಲುವುದು ಪ್ರತಿಯೊಂದು ತಂಡಕ್ಕೂ ಭಾರೀ ಸವಾಲಾಗಿ ಪರಿಣಮಿಸಿದೆ.
ರೋಹಿತ್, ಗಿಲ್, ಕೊಹ್ಲಿ, ಅಯ್ಯರ್ ಮತ್ತು ರಾಹುಲ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಸೂರ್ಯಕುಮಾರ್, ಜಡೇಜ ಕೂಡ ಭರವಸೆ ಮೂಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಗೈರು ಹಾಗೂ 6ನೇ ಬೌಲರ್ ಕೊರತೆ ಒಂದು ಮೂಲೆಯಲ್ಲಿ ಕಾಡುತ್ತಿದೆ, ಅಷ್ಟೇ.
ಲೀಗ್ನಲ್ಲಿ ನ್ಯೂಜಿಲ್ಯಾಂಡನ್ನು 4 ವಿಕೆಟ್ಗಳಿಂದ ಮಣಿಸಿದ ಖುಷಿ ನಮ್ಮ ಪಾಲಿಗಿದೆ. ಇಲ್ಲಿ ಎಡವಿದ ಬಳಿಕವೇ ಕಿವೀಸ್ಗೆ ಕಂಟಕ ಎದುರಾದದ್ದು. ಸತತ 4 ಪಂದ್ಯಗಳನ್ನು ಗೆದ್ದು ಇನ್ನೇನು ಸೆಮಿಫೈನಲ್ ಖಾತ್ರಿಗೊಂಡಿತು ಎನ್ನುವಷ್ಟರಲ್ಲಿ ನಿರಂತರ 4 ಸೋಲಿನ ಆಘಾತಕ್ಕೆ ಸಿಲುಕಿತು. ಸೆಮಿ ರೇಸ್ನಿಂದ ಹೊರಬೀಳುವ ಅಪಾಯಕ್ಕೂ ಸಿಲುಕಿತು. ಆದರೆ ಈ ಕಂಟಕದಿಂದ ಪಾರಾದದ್ದು ನ್ಯೂಜಿಲ್ಯಾಂಡ್ನ ಅದೃಷ್ಟಕ್ಕೆ ಸಾಕ್ಷಿ.
ಅನುಮಾನ ಬೇಡ, ನ್ಯೂಜಿ ಲ್ಯಾಂಡ್ ಅತ್ಯಂತ ಅಪಾಯಕಾರಿ ತಂಡ. ಆಲ್ರೌಂಡರ್ಗಳನ್ನು ಒಳಗೊಂಡ ಅವರ ಬ್ಯಾಟಿಂಗ್ ಸರದಿ ವೈವಿಧ್ಯಮಯ. ಕಾನ್ವೇ, ರಚಿನ್, ವಿಲಿಯಮ್ಸನ್, ಮಿಚೆಲ್, ಫಿಲಿಪ್ಸ್, ಚಾಪ್ಮನ್, ಲ್ಯಾಥಂ, ಸ್ಯಾಂಟ್ನರ್ ತನಕ ಬ್ಯಾಟಿಂಗ್ ಲೈನ್ಅಪ್ ವಿಸ್ತಾರವಾಗಿದೆ. ಬೌಲ್ಟ್, ಸೌಥಿ, ಫರ್ಗ್ಯುಸನ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.