ಬೆಂಗಳೂರು:- ಗೃಹಲಕ್ಷ್ಮಿ ಯೋಜನೆಗೆ ಉಂಟಾಗಿರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಈಗಾಗಲೇ 1 ಕೋಟಿ 10 ಲಕ್ಷ ಮಹಿಳೆಯರಿಗೆ ಈ ಯೋಜನೆ ತಲುಪಿದ್ದು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆಯಾ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಮೂರು ಕಂತಿನ ದುಡ್ಡು ಬಾರದೇ ಇದ್ದವರಿಗೆ ಏಕಕಾಲಕ್ಕೆ ಆರು ಸಾವಿರ ದುಡ್ಡು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
50 ಸಾವಿರ ತೆರಿಗೆದಾರರಿಂದ ಅರ್ಜಿ!
ಗೃಹಲಕ್ಷ್ಮಿ ಯೋಜನೆಗೆ ಸುಮಾರು 50 ಸಾವಿರ ತೆರಿಗೆದಾರರು ಕೂಡ ಅರ್ಜಿ ಹಾಕಿದ್ದು, ಅರ್ಜಿಗಳನ್ನು ನಿರಾಕರಿಸಿ ಡಿಲೀಟ್ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ
ಗೃಹಲಕ್ಷ್ಮಿ ಹಣ ಸಿಕ್ಕಿಲ್ಲ ಎಂಬ ಆತಂಕ ಬೇಡ, ಎಲ್ಲ ಮೊತ್ತ ಒಟ್ಟಿಗೇ ಸಿಗಲಿದೆ
ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಾಯಿಸಿಕೊಂಡ ಗೃಹಿಣಿಯರಲ್ಲಿ ಶೇಕಡಾ 95ರಷ್ಟು ಮನೆ ಒಡತಿಯರಿಗೆ ಈಗಾಗಲೇ ಹಣ ತಲುಪಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಶೇಕಡಾ 5ರಷ್ಟು ಜನರಿಗೆ ತಲುಪಿಲ್ಲ. ಈ ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ನ. 8ರಂದು ಹೇಳಿದ್ದರು. ಅಷ್ಟೇ ಅಲ್ಲ, ಒಮ್ಮೆ ತಾಂತ್ರಿಕ ಸಮಸ್ಯೆ ಪರಿಹಾರವಾದ ಬಳಿಕ ಬಾಕಿ ಮೊತ್ತವನ್ನೂ ಸೇರಿಸಿಯೇ ಕೊಡಲಾಗುವುದು ಎಂದು ಭರವಸೆ ನೀಡಿದ್ದರು.
ಶೇಕಡ 95ರಷ್ಟು ಯಶಸ್ವಿ
ಗೃಹಲಕ್ಷ್ಮಿ ಯೋಜನೆ ಇದುವರೆಗೂ ಶೇಕಡ 95 ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು.