ಹುಬ್ಬಳ್ಳಿ: ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದ, ಶ್ರೀರಾಮಜನ್ಮಭೂಮಿ ಕುರಿತು ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಕಾಂಗ್ರೆಸ್ಸಿನವರು ರಾಮ ಮಂದಿರದ ಯಶಸ್ಸಿನ ಪಾಲು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಶ್ರೀರಾಮಮಂದಿರ ಉದ್ಘಾಟನೆ ಆಹ್ವಾನ ಪತ್ರಿಕೆ ಜತೆ ನೀಡುತ್ತಿರುವ ಮಂತ್ರಾಕ್ಷತೆ ರಾಜ್ಯ ಸರಕಾರದ ಅನ್ನಭಾಗ್ಯದ ಅಕ್ಕಿ ಎಂದು ಹೇಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಈ ವರೆಗೆ ಒಂದೇ ಒಂದು ಅಕ್ಕಿ ಕಾಳನ್ನು ಕೊಟ್ಟಿಲ್ಲ. ಚುನಾವಣೆ ವೇಳೆ ಘೋಷಿಸಿರುವ 10 ಕೆಜಿ ಅಕ್ಕಿಯನ್ನು ಸಹ ನೀಡಿಲ್ಲ. ಈಗ ಮಂತ್ರಾಕ್ಷತೆಗೆ ರಾಜ್ಯ ಸರಕಾರದ ಯೋಜನೆ ಅಕ್ಕಿ ಬಳಸಲಾಗುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.
ಈ ಹಿಂದೆ ಶ್ರೀರಾಮ ಕಾಲ್ಪನಿಕ, ರಾಮಾಯಣ ನಡೆದ ಬಗ್ಗೆ ಪುರಾವೆ ಇಲ್ಲ ಎಂದು ಹೇಳುತ್ತಿದ್ದವರು, ಇದೀಗ ನಾವು ರಾಮನ ಭಕ್ತರು, ನಮ್ಮ ಯೋಜನೆ ಅಕ್ಕಿಯೇ ಮಂತ್ರಾಕ್ಷತೆಗೆ ಬಳಸುತ್ತಿದ್ದಾರೆ ಎಂದು ಕ್ರೆಡಿಟ್ ಪಡೆಯಲು ಮುಂದಾಗುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಬುದ್ಧಿವಂತರಿದ್ದು, ಎಲ್ಲವನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.