ಇರಾನ್ ವಿರುದ್ಧ ಪ್ರತೀಕಾರದ ಕ್ರಮ ಬೇಡ ಎಂದು ಇಸ್ರೇಲ್ಗೆ ಜಗತ್ತಿನ ಹಲವು ರಾಷ್ಟ್ರಗಳು ಒತ್ತಡ ಹೇರಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬ್ರಿಟನ್ ಗೃಹ ಸಚಿವ ಡೇವಿಡ್ ಕ್ಯಾಮರೂನ್ ಇರಾನ್ ಮೇಲೆ ಇಸ್ರೇಲ್ ನಡೆಸುವ ದಾಳಿಗೆ ಬೆಂಬಲ ಇಲ್ಲ ಎಂದಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್ ಕೂಡ ಪ್ರತೀಕಾರದ ಕ್ರಮ ಸಲ್ಲದು. ಈ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ.
ಸಿರಿಯಾದಲ್ಲಿ ತನ್ನ ರಾಯಭಾರ ಕಚೇರಿ ಮೇಲೆ ನಡೆದಿದ್ದ ದಾಳಿಗೆ ಇಸ್ರೇಲ್ ಕಾರಣವೆಂದು ಆರೋಪಿಸಿ ರುವ ಇರಾನ್ ರವಿವಾರ ಆ ದೇಶದ ಮೇಲೆ ದಾಳಿ ನಡೆಸಿತ್ತು.
ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಇರಾನ್ ನಮಗೆ ಮೊದಲೇ ಮಾಹಿತಿ ನೀಡಿಲ್ಲ. ಯುದ್ಧ ಆರಂಭವಾದ ಅನಂತರ ನಮ್ಮನ್ನು ಸಂಪರ್ಕಿಸಿದರು ಎಂದು ಅಮೆರಿಕ ಆರೋಪಿಸಿದೆ. ರವಿವಾರ ಮಾತನಾಡಿದ್ದ ಇರಾನ್ ಸಚಿವರು, ಅಮೆರಿಕಕ್ಕೆ ದಾಳಿ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದಿದ್ದರು.
ಕೂಡಲೇ ಎರಡೂ ರಾಷ್ಟ್ರಗಳು ಕದನ ವಿರಾಮ ಘೋಷಿಸಬೇಕು. ಇರಾನ್ ವಶದಲ್ಲಿರುವ ಹಡಗು ಸಿಬಂದಿಯನ್ನು ಬಿಡುಗಡೆಗೊಳಿಸಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ತಿಳಿಸಿದ್ದಾರೆ.