ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವಂತೆ ಸಾಕಷ್ಟು ಸಮಯದ ಹಿಂದೆಯೇ ಸೂಚನೆ ನೀಡಿದ್ದರು. ಆದರೂ ಸಾಕಷ್ಟು ರೈತರು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡಿಲ್ಲ. ಹೀಗಾಗಿ ಆಧಾರ್ ಲಿಂಕ್ ಮಾಡದವರಿಗೆ ಸಹಾಯಧನ ಕಡಿತಗೊಳ್ಳಲಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಕೃಷಿ ಪಂಪ್ಸೆಟ್ ಗೆ ಆಧಾರ್ ಲಿಂಕ್ ಮಾಡದವರಿಗೆ ಸಹಾಯಧನ ಕಡಿತ ಆಗಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಒಟ್ಟು 34 ಲಕ್ಷ ಕೃಷಿ ಪಂಪ್ ಸೆಟ್ಗಳಿದ್ದು ಅವುಗಳಲ್ಲಿ 32 ಲಕ್ಷ ಪಂಪ್ಸೆಟ್ಗೆ ಆಧಾರ್ ಲಿಂಕ್ ಆಗಿದೆ. ಇದರಿಂದ ಎಷ್ಟು ಸಬ್ಸಿಡಿ ಕೊಡಲಾಗುತ್ತಿದೆ ಎಂಬ ಲೆಕ್ಕ ಹಾಗು ನಿಜವಾದವರಿಗೇ ಸಹಾಯಧನ ಹೋಗುತ್ತಿದೆಯೇ ಎಂಬ ಮಾಹಿತಿ ದೊರೆಯುತ್ತದೆ. ಆಧಾರ್ ಲಿಂಕ್ ಮಾಡದೇ ಇರುವವರಿಗೆ ಏನು ಮಾಡಬೇಕು ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಖಾಸಗಿ ಹೊಟೇಲ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಸಹಾಯಧನ ಕಡಿತ ಬಗೆಗಿನ ಆತಂಕದ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಶೇ 95.4ರಷ್ಟು ಪಂಪ್ಸೆಟ್ಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಸುಮಾರು ಶೇ 6ರಷ್ಟು ಮಾತ್ರ ಮಾಡಿಲ್ಲ. ಲಿಂಕ್ ಮಾಡದೇ ಇರುವವರಿಗೆ ಏನು ಮಾಡಬೇಕು ಎಂಬುದನ್ನು ಪರಿಶೀಲಿಸುತ್ತೇವೆ. ಅವರಿಗೆ ಸಹಾಯಧನ ಕಡಿತ ಮಾಡುವ ಬಗ್ಗೆ ಸದ್ಯ ಯಾವುದೇ ಚಿಂತನೆ ಇಲ್ಲ. ಆಧಾರ್ ಲಿಂಕ್ ಮಾಡುವ ಮೂಲಕ ದುರ್ಬಳಕೆ ಆಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿರ್ಮಿಸಿರುವ ರಾಜ್ಯದ ಮೊಟ್ಟ ಮೊದಲ 370 ಮೆಗಾ ವ್ಯಾಟ್ ಸಾಮರ್ಥ್ಯದ ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು ಸೆ. 24ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಒಟ್ಟು 370 ಮೆ.ವ್ಯಾ. ಸಾಮರ್ಥ್ಯದ ‘ಯಲಹಂಕ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ (ಕಂಬೈನ್ಡ್ ಸೈಕಲ್ ಪವರ್ ಪ್ಲಾಂಟ್)ಅನ್ನು ಸುಮಾರು 2,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ಯಾಸ್ ಮತ್ತು ಸ್ಟೀಮ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿರುವುದು ಇದರ ವಿಶೇಷತೆ. ಗ್ಯಾಸ್ ಟರ್ಬೈನ್ ಮೂಲಕ 237 ಮೆ.ವ್ಯಾ. ಮತ್ತು ಸ್ಟೀಮ್ ಟರ್ಬೈನ್ ಮೂಲಕ 133 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದು ಬೆಂಗಳೂರು ಸಮೀಪ ಸ್ಥಾಪಿಸಿರುವ ಮೊದಲ ವಿದ್ಯುತ್ ಉತ್ಪಾದನಾ ಸ್ಥಾವರ ಎಂದು ಮಾಹಿತಿ ನೀಡಿದರು.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ 2014ರ ಜು.28ರಂದು ವಿದ್ಯುತ್ ಸ್ಥಾವರ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿತ್ತು. ಪ್ರಸ್ತುತ ಉಪಮುಖ್ಯಮಂತ್ರಿಗಳಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಘಟಕದ ಕಾರ್ಯಾಚರಣೆಗಿದ್ದ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಕಳೆದ ಆಗಸ್ಟ್ 8ರಂದು ಪೂರ್ಣ ಲೋಡ್ 370 ಮೆ.ವ್ಯಾ. (20 ಗಂಟೆಗಳ) ನಿರಂತರ ಸಂಯುಕ್ತ ಆವರ್ತ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇದೀಗ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುತ್ತಿದೆ. ಇದರ ಉತ್ಪಾದನಾ ವೆಚ್ಚ ಪ್ರತಿ ಯುನಿಟ್ 7.90 ರೂ. ಇದೆ ಎಂದರು.