ಬೆಂಗಳೂರು:- ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮಾತೃಭಾಷೆ ಅಥವಾ ರಾಜ್ಯ ಭಾಷೆಯ ಕಡ್ಡಾಯ ಶಿಕ್ಷಣ ವಿಚಾರ ಕುರಿತು ವಿಧಾನಸಭೆಯ ಉಭಯ ಸದನಗಳಿಂದ ಅಂಗೀಕಾರಗೊಂಡಿರುವ ರಾಜ್ಯದ ಮಸೂದೆಗೆ ಇನ್ನೂ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕದ ಕಾರಣ, ಕಡ್ಡಾಯ ಶಿಕ್ಷಣ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ.
ಆದರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015ರಲ್ಲಿ ಉಭಯ ಸದನಗಳಲ್ಲಿ ಮಂಡನೆ ಆಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ 1-5 ತರಗತಿವರೆಗೆ ಮಾತೃಭಾಷೆ- ರಾಜ್ಯಭಾಷೆ ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿ ಅಂಗೀಕರಿಸಲಾಗಿದ್ದ ಮಸೂದೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಕೇಂದ್ರ ಸರ್ಕಾರ ಮಾತೃಭಾಷೆಯ ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಮಸೂದೆ ಒಪ್ಪದ ಕೇಂದ್ರ ಸುಪ್ರಿಂಕೋರ್ಟ್ ತೀರ್ಪು ಆಧರಿಸಿ, ರಾಜ್ಯದ ವಿಧೇಯಕ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿಳಿಸಿದೆ ಎನ್ನುವ ವಿಷಯವನ್ನು ಸದನದ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಯು ಬಿ ವೆಂಕಟೇಶ್, ನಮ್ಮ ಮಕ್ಕಳಿಗೆ ನಾವೇ ಕನ್ನಡ ಕಲಿಸದೇ ಆದ್ಯತೆ ನೀಡದಿದ್ದರೆ ಹೇಗೆ?. ಇದಕ್ಕೆ ಸರ್ಕಾರ ಏನಾದರೂ ದಾರಿ ಹುಡುಕಬೇಕು. ಕೇಂದ್ರಕ್ಕೆ ಸಂಸದರು ಹೋಗಿ ಒತ್ತಾಯ ಮಾಡಿ ಏನಾದ್ರೂ ಪರಿಹಾರ ಮಾಡಬೇಕು. ಎಂಟು ವರ್ಷಗಳಾದರೂ ವಿಧೇಯಕಕ್ಕೆ ಅನುಮೋದನೆ ಸಿಕ್ಕಿಲ್ಲ ಎಂದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ಮಧು ಬಂಗಾರಪ್ಪ, ನಮ್ಮ ನಿಲುವು ಸ್ಪಷ್ಟವಾಗಿದೆ. ಆದರೆ ಪ್ರಥಮ ಭಾಷೆ, ದ್ವಿತೀಯ ಭಾಷೆ ಕನ್ನಡ ಕಡ್ಡಾಯ ಮಾಡಿದ್ದೇವೆ. ಆದರೆ ಮೀಡಿಯಂ ಆಫ್ ಸ್ಟಡೀಸ್ ಸುಪ್ರಿಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಡ್ಡಾಯ ಮಾಡುವುದಕ್ಕೆ ಬರುವುದಿಲ್ಲ ಎಂದರು. ಇದಕ್ಕೆ ಅಸಮಾಧಾನಗೊಂಡ ಯು ಬಿ ವೆಂಕಟೇಶ್, ಹಾಗಾದ್ರೆ ಕೇಂದ್ರದವರು ಹಿಂದಿ ಹೇರಿಕೆ ಹೇಗೆ ಮಾಡ್ತಾರೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡುವುದಕ್ಕೆ ಬರುವುದಿಲ್ಲ. ಹಿಂದಿ ಹೇರಿಕೆ ನಾವು ಕೂಡ ಒಪ್ಪುವುದಿಲ್ಲ ಎಂದು ಹೇಳಿದರು.