ನವದೆಹಲಿ:- ಇನ್ನು ಮುಂದೆ ಯುಐಡಿಎಐ ಬದಲು ರಾಜ್ಯ ಸರ್ಕಾರವು ಆಧಾರ್ ನೋಂದಣಿಯ ಸಂಪೂರ್ಣ ಪರಿಶೀಲನೆ ನಡೆಸಲಿದೆ. ಈ ಕಾರ್ಯಕ್ಕಾಗಿ, ರಾಜ್ಯ ಸರ್ಕಾರವು ಜಿಲ್ಲಾ ಮತ್ತು ಉಪ-ವಿಭಾಗೀಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್ಗಳನ್ನು ನೇಮಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟವರು ನಿಗದಿಪಡಿಸಿದ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಪಡೆಯಬಹುದು. ಪ್ರತಿ ಜಿಲ್ಲೆಯ ಮುಖ್ಯ ಅಂಚೆ ಕಚೇರಿ ಮತ್ತು ಯುಐಡಿಎಐ ನಿರ್ದಿಷ್ಟಪಡಿಸಿದ ಇತರ ಆಧಾರ್ ಕೇಂದ್ರಗಳಲ್ಲಿಯೂ ಈ ಸೌಲಭ್ಯ ದೊರೆಯಲಿದೆ.
ಆಧಾರ್ ಅರ್ಜಿಗಳನ್ನು ಸೇವಾ ಪೋರ್ಟಲ್ ಸ್ವೀಕರಿಸುವ ಮೊದಲು ಡೇಟಾ ಗುಣಮಟ್ಟ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಎಲ್ಲ ಅಪ್ಲಿಕೇಷನ್ನ ಪರಿಶೀಲನೆಯನ್ನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮೇಲ್ವಿಚಾರಣೆ ನಡೆಸುತ್ತಾರೆ. ಅನುಮತಿ ಪಡೆದ 180 ದಿನಗಳಲ್ಲಿ ಆಧಾರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಐಡಿಎಐ ಅಧಿಕಾರಿ ಪ್ರಶಾಂತ್ ಕುಮಾರ್ ಸಿಂಗ್ ಮಾತನಾಡಿ, ʼʼಇತ್ತೀಚೆಗೆ ಹೊರಡಿಸಲಾದ ನಿರ್ದೇಶನಗಳು ಮೊದಲ ಬಾರಿಗೆ ಆಧಾರ್ ಕಾರ್ಡ್ ಪಡೆಯುವ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಅನ್ವಯವಾಗುತ್ತದೆʼʼ ಎಂದು ತಿಳಿಸಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದೆ.
ಈ ರೀತಿಯ ವೆರಿಫಿಕೇಶನ್ ಪ್ರಕ್ರಿಯೆ ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿರುವ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಅನ್ವಯ. ಒಮ್ಮೆ ಈ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್ ಮಾಡಿಸಿದ ಬಳಿಕ ಅವರು ಆಧಾರ್ ಅಪ್ಡೇಟ್ ಇತ್ಯಾದಿ ಕಾರ್ಯಗಳನ್ನು ಮಾಮೂಲಿಯಾಗಿಯೇ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಆಧಾರ್ ಕಾರ್ಡ್ನಲ್ಲಿ ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದಾದ ಕಾಲವಕಾಶವನ್ನು ಇತ್ತೀಚೆಗೆ ಯುಐಡಿಎಐ ಮತ್ತೊಮ್ಮೆ ವಿಸ್ತರಿಸಿದೆ. “ಆಧಾರ್ ಕಾರ್ಡ್ನ ಮಾಹಿತಿಯನ್ನು ಉಚಿತವಾಗಿ ನವೀಕರಿಸಬಹುದಾದ ಸೌಲಭ್ಯವನ್ನು ಇನ್ನೂ 3 ತಿಂಗಳು ವಿಸ್ತರಿಸಲಾಗಿದೆ. ಅಂದರೆ 2024ರ ಮಾರ್ಚ್ 14ರವರೆಗೆ ಉಚಿತ ನವೀಕರಣಕ್ಕೆ ಅವಕಾಶವಿದೆʼʼ ಎಂದು ತಿಳಿಸಿದೆ. ಈ ಸೇವೆಯು ಹಿಂದಿನಂತೆ ಮೈ ಆಧಾರ್ (myAadhaar) ಪೋರ್ಟಲ್ನಲ್ಲಿ ಮಾತ್ರ ಉಚಿತವಾಗಿದ್ದು, ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು. 2024ರ ಮಾರ್ಚ್ 14ರ ನಂತರ ನೀವು ಶುಲ್ಕ ಪಾವತಿಸಿ ಅಪ್ಡೇಟ್ ಮಾಡಬೇಕಾಗುತ್ತದೆ ಎಂದು ಯುಐಡಿಎಐ ತಿಳಿಸಿದೆ.
ಯುಐಡಿಎಐ ಪ್ರಜೆಗಳು ತಮ್ಮ ಆಧಾರ್ ವಿವರಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. ಮದುವೆ, ವಾಸಸ್ಥಾನ ಬದಲಾವಣೆ ಇತ್ಯಾದಿ ಜೀವನ ಘಟನೆಗಳಿಂದ ವ್ಯಕ್ತಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಾಗಬಹುದು. ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೊಸ ಸ್ಥಳಗಳಿಗೆ ವಲಸೆ ಹೋದಾಗ ಬದಲಾಗಬಹುದು. ಇದರ ಜತೆಗೆ ಮಕ್ಕಳ ಆಧಾರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, ಮಗುವಿಗೆ 15 ವರ್ಷ ವಯಸ್ಸಾದಾಗ ನವೀಕರಣಕ್ಕಾಗಿ ಎಲ್ಲ ಬಯೋಮೆಟ್ರಿಕ್ಗಳನ್ನು ಒದಗಿಸಬೇಕು.