ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಚಿತಾ ರಾಮ್ ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಮದುವೆಯಾವಾಗ ಆಗ್ತಾರೆ ಎಂಬ ಕುತೂಹಲ ಹಲವರಿಗೆ ಇದೆ. ಮದುವೆ ಬಗ್ಗೆ ರಚಿತಾ ರಾಮ್ ಅವರಿಗೆ ಹಲವು ಭಾರಿ ಪ್ರಶ್ನೆ ಎದುರಾಗಿದೆ. 32 ವರ್ಷದ ರಚಿತಾ ರಾಮ್ ಸದ್ಯಕ್ಕಂತೂ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಈ ಬಗ್ಗೆ ರಚಿತಾ ಮಾಡಿರುವ ಪೋಸ್ಟ್ ಒಂದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
‘ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಾನು ನಿಮಗೆ ಬೀಳಲ್ಲ’ ಎಂದು ರಚಿತಾ ರಾಮ್ ಹೇಳಿದ್ದಾರೆ. ಜೀ ಕನ್ನಡದಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಆರಂಭ ಆಗುತ್ತಿದೆ. ಇದಕ್ಕೆ ರಚಿತಾ ರಾಮ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಇದರ ಪ್ರೋಮೋನ ಜೀ ಕನ್ನಡ ಹಂಚಿಕೊಂಡಿದೆ. ಭಿನ್ನವಾಗಿ ಈ ಪ್ರೋಮೋನ ಮಾಡಲಾಗಿದ್ದು, ಗಮನ ಸೆಳೆದಿದೆ. ತಮ್ಮನ್ನು ಬೀಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದವರಿಗೆ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.
‘10 ಸಾವಿರ ವರ್ಷಗಳ ಹಿಂದೆ ಸುಂದರಿಯನ್ನು ಪಟಾಯಿಸಲು ಆದಿ ಮಾನವ ಗಾಲಿಯನ್ನು ಕಂಡು ಹಿಡಿದ. ಗಾಲಿ ಮನದಾಳದ ಬದಲು ಪಾತಾಳಕ್ಕೆ ಇಳಿಯಿತು. ಪ್ರೀತಿಯ ಕಿಚ್ಚು ಹಚ್ಚಲು ಬಂದವ ಬೆಂಕಿಯಲ್ಲಿ ಮರೆಯಾಗಿ ಹೋದ. ಹೂವು ತಂದವ ಮಿಂಚಿನಂತೆ ಮರೆಯಾದ. ಇವರ ಪ್ರೀತಿಯ ಹಸಿವು ಸ್ವಯಂವರಕ್ಕೂ ಕಾಲಿಟ್ಟಿತು. ಕಾಡಿನಿಂದ ನಾಡಿಗೆ ಬಂದರೂ ಬ್ಯಾಚುಲರ್ಗಳಾಗಿಯೇ ಉಳಿದರು’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಇವರೆಲ್ಲ ಮದುವೆ ಆಗೋಕೆ ಪ್ರಯತ್ನಿಸುತ್ತಿರೋದು ರಚಿತಾ ರಾಮ್ ಅವರನ್ನು! ಇದಕ್ಕೆ ರಚಿತಾ ರಾಮ್, ‘ನೀವುಗಳು ನನ್ನ ಹಿಂದೆ ಎಷ್ಟೇ ವರ್ಷ ಬಂದರೂ ನಾನು ನಿಮಗೆ ಬೀಳಲ್ಲ’ ಎಂದಿದ್ದಾರೆ. ಈ ವೇಳೆ ರವಿಚಂದ್ರನ್ ಎಂಟ್ರಿ ಆಗುತ್ತದೆ. ಈ ರೀತಿಯಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಪ್ರೋಮೋ ಮೂಡಿ ಬಂದಿದೆ.