ಚಿಕ್ಕೋಡಿ (ಬೆಳಗಾವಿ): ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಡಿ ಕೆ ಶಿವಕುಮಾರ್ ನನ್ನ ವಿರುದ್ಧ 420 ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಡಿ ಕೆ ಶಿವಕುಮಾರ್ ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕ ರಾಜು ಕಾಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಕಾಗವಾಡ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
”
ಹಿಂದೆ ಸಿ ಡಿ ಕೇಸ್ನಲ್ಲಿ ನನಗೆ ಶಿಕ್ಷೆ ನೀಡಬೇಕೆಂದು ಕಾಂಗ್ರೆಸ್ನವರು ಪ್ರಯತ್ನಪಟ್ಟಿದ್ದರು. ಆದ್ರೆ ಆಗ್ಲಿಲ್ಲ. ಈಗ ತಮ್ಮ ಸರ್ಕಾರದ ಅವಧಿಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣಗಳು ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಿಂದ ನಾನು ಹಿಂದೆ ಸರಿಯುವುದಿಲ್ಲ. ನಾನು ಗಟ್ಟಿಯಾಗಿ ಇದ್ದೇನೆ, ಇದನ್ನು ಎದುರಿಸುತ್ತೇನೆ. ಈ ಕುರಿತು ನಮ್ಮ ವಕೀಲರು ಹೆಚ್ಚಿಗೆ ಮಾತನಾಡಬೇಡಿ ಅಂದಿದ್ದಾರೆ. ಅದ್ದರಿಂದ ಏನು ಮಾಹಿತಿ ನೀಡುವುದಿಲ್ಲ” ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ವಿರುದ್ಧ ಅಪೆಕ್ಸ್ ಬ್ಯಾಂಕ್ ನಿಂದ ವಂಚನೆ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಪ್ರಕರಣ ದಾಖಲು ಮಾಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ. ನನಗೆ ಸಿಡಿ ಪ್ರಕರಣದಲ್ಲಿ ಶಿಕ್ಷೆ ಕೊಡಿಸಲು ಮುಂದಾಗಿದ್ದ, ಆದರೆ ಆಗ್ಲಿಲ್ಲ. ಅದರಲ್ಲಿ ಅವನು ವಿಫಲನಾಗಿದ್ದಾನೆ ಎಂದು ಏಕವಚನದಲ್ಲೇ ಹರಿಹಾಯ್ದರು.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಕೇಂದ್ರ ಸರ್ಕಾರ ರಜೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ರಾಜ್ಯ ಸರ್ಕಾರ ಇವತ್ತು ರಜೆ ಘೋಷಣೆ ಮಾಡುತ್ತದೆ ಎಂದು ನಿರೀಕ್ಷೆಯಲ್ಲಿ ಇದ್ದೇನೆ. ಕಾದು ನೋಡೋಣ ಎಂದು ಅಭಿಪ್ರಾಯ ತಿಳಿಸಿದರು.