ಚೆನ್ನೈ: ಆಪಲ್ ಪೂರೈಕೆದಾರ ಫಾಕ್ಸ್ಕಾನ್ ವಿರುದ್ಧ ಭಾರತದಲ್ಲಿನ ಐಫೋನ್ ಜೋಡಣಾ ಉದ್ಯೋಗಗಳಲ್ಲಿ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರದಿಂದ ವಿಸ್ತೃತ ವರದಿ ಕೇಳಿದೆ. ಇದರ ಬೆನ್ನಲ್ಲೇ ಸರ್ಕಾರಕ್ಕೆ ಮಾಹಿತಿ ನೀಡಿರುವ ಫಾಕ್ಸ್ಕಾನ್, ತನ್ನ ಶೇ 25ರಷ್ಟು ಹೊಸ ಉದ್ಯೋಗಿಗಳು ವಿವಾಹಿತೆಯರು ಎಂದು ತಿಳಿಸಿದೆ.
ಯಾವುದೇ ಲಿಂಗ ಅಥವಾ ಧರ್ಮದವರಾಗಿದ್ದರೂ, ಎಲ್ಲ ಉದ್ಯೋಗಿಗಳು ಸುರಕ್ಷತಾ ದೃಷ್ಟಿಯಿಂದ ಲೋಹದ ವಸ್ತುಗಳನ್ನು ಧರಿಸುವುದು ಅಗತ್ಯವಾಗಿದೆ. ಇದರಲ್ಲ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಅದು ಹೇಳಿದೆ. ಇಂತಹ ಷರತ್ತುಗಳು ತನ್ನ ನೀತಿಯ ಭಾಗವಾಗಿಲ್ಲ. ಇವು ಉದ್ಯೋಗ ಪಡೆದುಕೊಳ್ಳಲು ವಿಫಲವಾದ ಕೆಲವು ವ್ಯಕ್ತಿಗಳು ಮಾಡಿರುವ ಆರೋಪ ಎಂದು ಅದು ಸ್ಪಷ್ಟನೆ ನೀಡಿದೆ.ಇಂತಹ ಮಾಧ್ಯಮ ವರದಿಗಳು ಭಾರತದಲ್ಲಿನ ವೇಗವಾಗಿ ಬೆಳೆಯುತ್ತಿರುವ ಉತ್ಪಾದನಾ ವಲಯಕ್ಕೆ ಕಳಂಕ ತರಲು ಮಾಡುವ ಪ್ರಯತ್ನ ಎಂದು ಹೇಳಿದೆ.
Food Safety: ಆಹಾರದಲ್ಲಿ ಕೃತಕ ಬಣ್ಣ ಬಳಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳಿದೆ ಗೊತ್ತಾ..? ಇಲ್ಲಿದೆ ಮಾಹಿತಿ
ಫಾಕ್ಸ್ಕಾನ್ ಇಂಡಿಯಾ ಆಪಲ್ ಐಫೋನ್ ಘಟಕದಲ್ಲಿ ಮದುವೆಯಾದ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಬಂಧ ವಿವರವಾದ ವರದಿ ನೀಡುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತಮಿಳುನಾಡು ಕಾರ್ಮಿಕ ಇಲಾಖೆಗೆ ಬುಧವಾರ ಸೂಚನೆ ನೀಡಿತ್ತು. “ಇತ್ತೀಚಿನ ಶೇ 25ರಷ್ಟು ನೇಮಕಾತಿಗಳು ವಿವಾಹಿತ ಮಹಿಳೆಯರು ಎಂದು ಫಾಕ್ಸ್ಕಾನ್ ಸ್ಪಷ್ಟನೆ ನೀಡಿದೆ.
ಇದರ ಅರ್ಥ ಒಟ್ಟಾರೆ ಮಹಿಳೆಯರಲ್ಲಿ ಮೂರನೇ ಒಂದರಷ್ಟು ವಿವಾಹಿತರಾಗಿದ್ದಾರೆ. ಪ್ರಸ್ತುತ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ವಲಯದ ಯಾವುದೇ ಉದ್ಯಮಕ್ಕೆ ಹೋಲಿಸಿದರೂ ಈ ಅನುಪಾತ ಅಧಿಕವಾಗಿದೆ” ಎಂದು ಫಾಕ್ಸ್ಕಾನ್ ಮೂಲವೊಂದು ಹೇಳಿದೆ. ತಮಿಳುನಾಡಿನ ಘಟಕದಲ್ಲಿ ಫಾಕ್ಸ್ಕಾನ್ ಪ್ರಸ್ತುತ ಸುಮಾರು ಶೇ 70ರಷ್ಟು ಮಹಿಳೆಯರು ಹಾಗೂ ಶೇ 30ರಷ್ಟು ಪುರುಷ ಉದ್ಯೋಗಿಗಳನ್ನು ಹೊಂದಿದೆ. ಒಟ್ಟಾರೆ 45 ಸಾವಿರದವರೆಗೂ ಉದ್ಯೋಗಿಗಳನ್ನು ಹೊಂದುವ ಮೂಲಕ ಮಹಿಳಾ ಉದ್ಯೋಗದ ಅತಿ ದೊಡ್ಡ ಉದ್ಯಮವಾಗಿದೆ ಎಂದು ತಿಳಿಸಿದೆ.