ಬೆಂಗಳೂರು:- ಆರ್. ಎಸ್. ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ವಿಚಾರಣೆ ವೇಳೆ ಪ್ರಭಾಕರ ಭಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ‘ಅರ್ಜಿದಾರರ ವಿರುದ್ಧ ರಾಜಕೀಯಪ್ರೇರಿತ ಎಫ್ಐಆರ್ ದಾಖಲು ಮಾಡಲಾಗಿದೆ. ಅವರು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ಸಾಂವಿಧಾನಿಕವಾಗಿ ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಕೆಲವು ವಾಸ್ತವಾಂಶಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಅವರ ತೇಜೋವಧೆ ಮಾಡುವ ಏಕೈಕ ದುರುದ್ದೇಶದಿಂದ ಇಂತಹ ದೂರು ದಾಖಲಿಸಲಾಗಿದೆ. ದೂರುದಾರರು ರಾಜಕೀಯ ಪಕ್ಷದ ಪದಾಧಿಕಾರಿಯಾಗಿದ್ದು ಇಂತಹುದೇ ಅಪರಾಧಿಕ ಕಲಂಗಳಡಿ ದೂರು ದಾಖಲಿಸಬೇಕು, ಅವರ ವಿರುದ್ಧ ರೌಡಿ ಶೀಟ್ ತೆರೆಯಬೇಕು ಎಂದು ಪೊಲೀಸರಿಗೆ ಸೂಚಿಸುವ ಮೂಲಕ ಕಾನೂನಿನ ದುರುಪಯೋಗ ಮಾಡಿಕೊಂಡಿದ್ದಾರೆ. ಆದ್ದರಿಂದ, ಈ ದೂರು ಮತ್ತು ಕೋರ್ಟ್ ವಿಚಾರಣೆಯನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ಪೊಲೀಸರು ಮುಂದಿನ ವಿಚಾರಣೆ ತನಕ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು’ ಎಂದು ರಾಜ್ಯ ಪ್ರಾಸಿಕ್ಯೂಷನ್ ಪರ ವಕೀಲರಿಗೆ ಮಧ್ಯಂತರ ನಿರ್ದೇಶನ ನೀಡಿತು.
ಪ್ರತಿವಾದಿ ಪ್ರಾಸಿಕ್ಯೂಷನ್ ಹಾಗೂ ದೂರುದಾರರಾದ ನಜ್ಮಾ ನಜೀರ್ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು