ಬೆಂಗಳೂರು:- ಹೊಸವರ್ಷಾಚರಣೆಯಲ್ಲಿ ಕೋವಿಡ್ ನಿಯಮ ಪಾಲಿಸಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹೊಸ ವರ್ಷದ ಆಚರಣೆ ವೇಳೆ ಹೆಚ್ಚು ಜನರು ಒಂದೆಡೆ ಸೇರುವುದರಿಂದ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು’ ಎಂದರು.
ಕೊರೊನಾ ವೈರಾಣುವಿನ ರೂಪಾಂತರಿ ಓಮಿಕ್ರಾನ್ನ ಉಪತಳಿ ಜೆಎನ್.1 ಪ್ರಕರಣ ನಗರದಲ್ಲಿ ವರದಿಯಾಗಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಈಗಾಗಲೇ ಮಾರ್ಗಸೂಚಿಗಳು, ಸುತ್ತೋಲೆಗಳು ಹಾಗೂ ಸಲಹಾ ಪತ್ರಗಳನ್ನು ಹೊರಡಿಸಲಾಗಿದೆ. ಅವುಗಳ ಪಾಲನೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಲಭ್ಯವಿರುವ ಮಾಹಿತಿಯ ಪ್ರಕಾರ ಜೆಎನ್.1 ಉಪತಳಿಯು ಹೆಚ್ಚು ಹರಡುವಿಕೆಯ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ವೃದ್ಧರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಇತರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಈವರೆಗೆ ವರದಿಯಾದ 34 ಜೆಎನ್.1 ಪ್ರಕರಣಗಳಲ್ಲಿ 21 ಪ್ರಕರಣಗಳು ನಗರದಲ್ಲಿಯೇ ದೃಢಪಟ್ಟಿವೆ. ಆದ್ದರಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೊರಾಂಗಣ ಹಾಗೂ ಒಳಾಂಗಣ ಪ್ರದೇಶದಲ್ಲಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು. ಮುಖಗವಸು ಧರಿಸುವಿಕೆ, ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಸೋಂಕು ನಿವಾರಕ ದ್ರಾವಣ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದ್ದಾರೆ