ಹೊಸ ವರ್ಷದಂದು ಯುಐ (UI) ಕುರಿತಂತೆ ಹೊಸ ಅಪ್ ಡೇಟ್ ನೀಡುವುದಾಗಿ ಉಪ್ಪಿ (Upendra) ಹೇಳಿಕೊಂಡಿದ್ದರು. ಅದರಂತೆ ಇವತ್ತು ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಓಡುತ್ತಿರುವ ಕುದುರೆ, ಕುದುರೆ ಕಾಲಿನ ಲಾಳದಿಂದ ಹೊರಬರುವ ಬೆಂಕಿ, ಆ ನಂತರ ದಿನಾಂಕವೊಂದು ರಿವೀಲ್ ಆಗುತ್ತದೆ. ಅಲ್ಲಿ ದಿನಾಂಕ ಬಿಟ್ಟು, ತಿಂಗಳು ಮತ್ತು ವರ್ಷವನ್ನು ಹಾಕಿದ್ದಾರೆ. ದಿನಾಂಕ ಗುರುತಿಸಿ, ಇವೆಂಟ್ ನಲ್ಲಿ ಭಾಗಿಯಾಗಲು ಪಾಸ್ ಪಡೆಯಿರಿ ಎಂದಿದ್ದಾರೆ.
ದಿನಾಂಕ ಗ್ಯಾಪ್ ಬಿಟ್ಟಿರೋದು ಸಿನಿಮಾ ರಿಲೀಸ್ (Release) ದಿನಾಂಕ ಇರಬಹುದಾ ಅಥವಾ ಇವೆಂಟ್ ದಿನಾಂಕ ಇರಬಹುದಾ ಗೊತ್ತಿಲ್ಲ. ಒಟ್ಟಿನಲ್ಲಿ ದಿನಾಂಕ ಡಿಕೋಡ್ ಮಾಡಿ ಎಂದಷ್ಟೇ ಹೇಳಿದ್ದಾರೆ. ಅದು ರಿಲೀಸ್ ದಿನಾಂಕ ಆಗಿದ್ದರೆ, ಇದೇ ತಿಂಗಳು ಯುಐ ಸಿನಿಮಾ ರಿಲೀಸ್ ಆಗಲಿದೆ. ಯಾವ ದಿನದಂದು ಅನ್ನೋದು ಮಾತ್ರ ರಹಸ್ಯವಾಗಿ ಉಳಿದುಕೊಂಡಿದೆ.
ಉಪ್ಪಿಇದೊಂದು ಹೆಸರು ಕನ್ನಡಿಗರಿಗೆ ಮಾತ್ರ ಅಲ್ಲ, ದಕ್ಷಿಣ ಭಾರತದ ಜನರಲ್ಲಿ ಕಿಚ್ಚು ಮೂಡಿಸುತ್ತದೆ. ಹುಚ್ಚು ಹಿಡಿಸುತ್ತದೆ. ಅದರಲ್ಲೂ ಇವರೇ ನಿರ್ದೇಶಕ ಅದರಂತೂ ಕೇಳಬೇಕೆ? ಇಲ್ಲಿವರೆಗೆ ಉಪ್ಪಿ ನಿರ್ದೇಶನ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ, ಈ ಯುಐ ಇದೆಯಲ್ಲ ಅದು ಭೂಮಿ ತೂಕ. ಭರ್ತಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹಲವಾರು ಗ್ರೇಟ್ ಸ್ಪೆಶಾಲಿಟಿಗಳಿವೆ. ಭಾರತದಲ್ಲೇ ಮೊದಲ ಬಾರಿ ಎನ್ನುವಂಥ ವಿಷಯ ಹಾಗೂ ತಾಂತ್ರಿಕ ಕೆಲಸಗಳಿವೆ. ಅದಕ್ಕಾಗಿಯೇ ಬೆಂಗಳೂರು ಸಮೀಪ ಹತ್ತು ಎಕರೆ ಜಾಗದಲ್ಲಿ ಹಿಂದೆಂದೂ ಕಾಣದಂಥ ಸೆಟ್ ಹಾಕಿ ಶೂಟ್ ಮಾಡಲಾಗಿದೆ.