ಬೈಂದೂರು: ಎಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ ಇದೆ ದಿನಾಂಕ ೨೪-೨೫ ರಂದು ನೆರವೇರಿತು. ಹೊನ್ನಮನೆ ಶ್ರೀಮತಿ ಕುಪ್ಪು ಪೂಜಾರ್ತಿ ಮತ್ತು ಶ್ರೀ ನಂದಾ ಪೂಜಾರಿಯವರ ಸ್ಮಾರಕ ನೂತನ ರಂಗ ಮಂದಿರವನ್ನು ಉದ್ಘಾಟಿಸಿದ ಚಿಕ್ಕಮಗಳೂರು ಮತ್ತು ಉಡುಪಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮನುಷ್ಯರಲ್ಲಿ ಪರಿಪೂರ್ಣತೆ ತರುವದೇ ಶಿಕ್ಷಣ. ನೈತಿಕ ಮೌಲ್ಯಗಳಿಲ್ಲದ ಆಧುನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಸ್ವಾರ್ಥಿಯಾಗಿಸುತ್ತಿವೆ. ಮನುಷ್ಯನಲ್ಲಿ ಗುರು ಹಿರಿಯರ ಅನಾದರ, ಧಾರ್ಮಿಕ ನಂಬಿಕೆಗಳ ಅವಹೇಳನ ಸದಾ ಸ್ವಹಿತ ಚಿಂತನೆಗೆ ಪ್ರಾಮುಖ್ಯತೆ ನೀಡುವಂತೆ ಮಾಡಿದೆ ಎಂದು ತಿಳಿಸಿದರು.
ನಾಡೋಜ ಎಸ ಷಡಕ್ಷರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಊರಿನ ಹಬ್ಬದಂತೆ ಆಚರಿಸಲಾಗುತ್ತಿರುವದು ಜನರು ಶಾಲೆ ಮೇಲಿನ ಅಭಿಮಾನವೇ ಕಾರಣವಾಗಿದೆ. ಶಾಲೆಗೆ ರಂಗಮಂದಿರ ಕೊಡುಗೆ ನೀಡಿದ ಉದ್ಯಮಿ ಶ್ರೀ ಚಂದನ್ ಬಿಲ್ಲವ ಹೊನ್ನಮನೆ, ತಮ್ಮ ಊರು, ಶಾಲೆ, ತಾವು ಬೆಳೆದ ಜೀವನ, ಹಾಗೂ ಮುಂದಿನ ದಿನಗಳಲ್ಲಿ ಹೇಗೆ ಯಳಜಿತ್ ಶಾಲಾ ವ್ಯವಸ್ಥೆ ಹೇಗಿರಬೇಕು ಹಾಗೂ ಶಾಲಾ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಕೌಶಲ್ಯ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ ಬೈಂದೂರು ಕ್ಷೇತ್ರದಲ್ಲಿ ಸರಕಾರಿ ಶಾಲೆಗಳನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದ್ದು ಶ್ರೀ ಚಂದನ ಬಿಲ್ಲವರಂತಹ ಹಳೆ ವಿದ್ಯಾರ್ಥಿಗಳು ಶಾಲೆಗೆ ಇಷ್ಟೊಂದು ದೊಡ್ಡ ಮೊತ್ತದ ರಂಗ ಮಂದಿರ ಕೊಡುಗೆ ನೀಡಿರುವದು ಮತ್ತು ಅಭಿವೃದ್ಧಿಗೆ ಮುಂದೆ ಬಂದಿರುವದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು. ಬಿ ಜೆ ಪಿ ಮಂಡಲ ಅಧ್ಯಕ್ಷರಾದ ಶ್ರೀ ದೀಪಕ ಕುಮಾರ್ ಶೆಟ್ಟಿಯವರು ಶಾಲೆಗೆ ವಾಹನವನ್ನು ನೀಡಿ ಶತಮಾನ ಶಾಲೆಗೆ ಶುಭ ಹಾರೈಸಿದರು.
ಎರಡನೇ ದಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನಾ ಸಮಾರಂಭದಲ್ಲಿ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಮತ್ತು ನೈತಿಕ ಅಂಶಗಳು ಅಳವಡಿಸುವದು ಬಹಳ ಮುಖ್ಯವಾಗಿದೆ ಎಂದು ಆಶೀರ್ವಚನ ನೀಡಿದರು ಇದಲ್ಲದೇ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಗಳು ಸಂಗೀತ, ಭಜನಾ ಕಾರ್ಯಕ್ರಮವನ್ನು ಮಾಡಿದರು.
ಶತಸಿಂಚನ ಸ್ಮರಣ ಸಂಚಿಕೆ ಬಿಡುಗಡೆ
ಸಂಜೆ ಸಮಾರೋಪ ಸಮಾರಂಭದಲ್ಲಿ ಶಾಲೆಯ ಸ್ಮರಣ ಸಂಚಿಕೆ ಶತ ಸಿಂಚನ ಎನ್ನುವ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. ಸ್ಮರಣ ಸಂಚಿಕೆ ಸಂಪಾದಕರ ಮಂಡಳಿಯ ಸದಸ್ಯರಾದ ಶ್ರೀ ರೂಪೇಶ್ ಪೂಜಾರಿ, ಡಾ ಮಹದೇವ್ ಗೌಡ, ಶ್ರೀ ಚಂದ್ರ ಕೊಠಾರಿ, ಶ್ರೀ ಸದಾಶಿವ ಶೆಟ್ಟಿ ಶ್ರೀಮತಿ ಬೇಬಿ ಇವರುಗಳ ಪರಿಶ್ರಮದಿಂದ ಸ್ಮರಣ ಸಂಚಿಕೆ ಉತ್ತಮವಾಗಿ ಮೂಡಿ ಬಂದಿದ್ದು,
ಊರಿನ ಇತಿಹಾಸ, ಶಾಲೆಯ ಇತಿಹಾಸ ಮತ್ತು ಶಾಲೆಯ ಕುರಿತ ವಿವಿಧ ಲೇಖನಗಳು, ಕವಿತೆಗಳನ್ನು ಹಾಗೂ ಹಿಂದೆ ಸೇವೆಸಲ್ಲಿಸಿದ ಮತ್ತು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕುರಿತು ಮತ್ತು ಶತಮಾನೋತ್ಸವ ಕುರಿತು ನಡೆದ ವಿವಿಧ ಕಾರ್ಯಕ್ರಮಗಳನ್ನು ಇದರಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಧಾನ ಸಂಪಾದಕರಾದ ಡಾ ನಾರಾಯಣ ಬಿಲ್ಲವ ಹೊನ್ನಮನೆ ತಿಳಿಸಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿ ಶ್ರೀ ಸಂದೀಪ್ ಕುಮಾರ್, ಮುಖ್ಯ ಶಿಕ್ಷಕಿ ಪದ್ಮಾವತಿ, ಶತಮಾನೋತ್ಸವ ಅಧ್ಯಕ್ಷ ಶ್ರೀ ಮಂಗೇಶ್ ಶಾನುಭಾಗ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ನಾಗೇಶ್ ನಾಯ್ಕ್, ಕಟ್ಟಡ ನಿರ್ಮಾಣ ಸಮಿತಿಯ ಶ್ರೀ ರಮೇಶ್ ಪೂಜಾರಿ ಸಾಂತೇರಿಮತ್ತು ಗೋಳಿಹೊಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಮಂಜಯ್ಯ ಪೂಜಾರಿ, ಶ್ರೀ ಕೆ ಎಂ ಕೊಠಾರಿ, ರವಿಚಂದ್ರ ಶೆಟ್ಟಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.