ದಕ್ಷಿಣ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಹಾಗೂ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ಹೈದರಾಬಾದ್ ನಲ್ಲಿ ಡಿಸೆಂಬರ್ 4ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾಗಾರ್ಜುನ್ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ಹಸೆಮಣೆ ಏರಿದ್ದಾರೆ. ನಾಗಚೈತನ್ಯ, ಶೋಭಿತಾ ಮದುವೆಗೆ 400 ಮಂದಿಗೆ ಆಹ್ವಾನ ನೀಡಲಾಗಿತ್ತು.
ಮದುವೆಯಾದ ಬೆನ್ನಲ್ಲೇ ನವ ದಂಪತಿ ಶ್ರೀಶೈಲದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ನವ ಜೋಡಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸಾಥ್ ನೀಡಿದ್ರು.
ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ನಾಗಾರ್ಜುನ, ನಾಗ ಚೈತನ್ಯ ಮತ್ತು ಶೋಭಿತಾ ಪೂಜೆ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಮಂತಾ ಜೊತೆಗಿನ ವಿಚ್ಛೇದನದ ನಂತರ 2 ವರ್ಷಗಳ ಕಾಲ ಶೋಭಿತಾ ಧೂಳಿಪಲ ಜೊತೆ ಡೇಟಿಂಗ್ ಮಾಡುತ್ತಿದ್ದ ನಾಗ ಚೈತನ್ಯ, ಎರಡೂ ಕಡೆಯ ಹಿರಿಯರ ಮನವೊಲಿಸಿ ಈ ವರ್ಷ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ನಾಗ ಚೈತನ್ಯ, ಶೋಭಿತಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ಚಿತ್ರರಂಗದ ಗಣ್ಯರು, ಆಪ್ತರು, ಬಂಧುಗಳು ಪಾಲ್ಗೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ಕೂಡಾ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು.
‘ನಾಗ ಚೈತನ್ಯ ಮತ್ತು ಶೋಭಿತಾ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಇದು ನನಗೆ ಒಂದು ಭಾವನಾತ್ಮಕ ಕ್ಷಣ. ನಾಗ ಚೈತನ್ಯಗೆ ಅಭಿನಂದನೆಗಳು. ನಮ್ಮ ಕುಟುಂಬಕ್ಕೆ ಶೋಭಿತಾಗೆ ಸ್ವಾಗತ. ನೀನು ಈಗಾಗಲೇ ನಮ್ಮ ಬದುಕಿನಲ್ಲಿ ಸಾಕಷ್ಟು ಖುಷಿ ತಂದಿರುವೆ’ ಎಂದು ಅಕ್ಕಿನೇನಿ ನಾಗಾರ್ಜುನ ಬರೆದುಕೊಂಡಿದ್ದಾರೆ.
ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೂರ್ತಿಯ ಕೆಳಗೆ ಮದುವೆ ನಡೆದಿರುವುದು ವಿಶೇಷ ಎಂದು ನಾಗಾರ್ಜುನ ಅವರು ಹೇಳಿದ್ದಾರೆ.
ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಮಧ್ಯೆ ಪರಿಚಯ ಬೆಳೆದು ಈಗ ಮದುವೆ ಆಗಿ ಹೊಸ ಜೀವನ ಆರಂಭಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ಕೋರಿದ್ದಾರೆ.