ಸತತ 12 ವರ್ಷಗಳ ಕಾಲ ನ್ಯೂಜಿಲೆಂಡ್ ಟೆಸ್ಟ್ ತಂಡವನ್ನು ಪ್ರತಿನಿಧಿಸಿದ್ದ ನೀಲ್ ವ್ಯಾಗ್ನರ್ ಅವರು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸುದ್ದಿಗೋಷ್ಠಿಯಲ್ಲಿ ತಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೆ ಕಣ್ಣೀರಿಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಫೆಬ್ರವರಿ 29 ರಂದು ಆರಂಭವಾಗುವ ಟೆಸ್ಟ್ ಸರಣಿ ನೀಲ್ ವ್ಯಾಗ್ನರ್ ಪಾಲಿಗೆ ಕೊನೆಯ ಸರಣಿಯಾಗಿದೆ. ಇಲ್ಲಿಯವರೆಗೂ ಅವರು ಕಿವೀಸ್ ಪರ ಆಡಿದ 64 ಪಂದ್ಯಗಳಿಂದ 260 ಟೆಸ್ಟ್ ವಿಕೆಟ್ಗಳನ್ನು ಕಬಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡದ ವೇಗಿ ನೀಲ್ ವ್ಯಾಗ್ನರ್ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಮಂಗಳವಾರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವೃತ್ತಿ ಜೀವನವನ್ನು ಅಂತ್ಯಗೊಳಿಸಿದ್ದಾರೆ.
ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 9 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. 2017ರಲ್ಲಿ ವೆಲ್ಲಿಂಗ್ಟನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 39ಕ್ಕೆ 7 ವಿಕೆಟ್ಗಳನ್ನು ಕಬಳಿಸಿದ್ದ ನೀಲ್ ವ್ಯಾಗ್ನರ್ ಅವರ ಟೆಸ್ಟ್ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಸ್ಪೆಲ್ ಆಗಿದೆ. ಭಾರತದ ವಿರುದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡದ 8 ವಿಕೆಟ್ಗಳ ಗೆಲುವಿನಲ್ಲಿ ನೀಲ್ ವ್ಯಾಗ್ನರ್ ಪ್ರಮುಖ ಪಾತ್ರವನ್ನು ವಹಿಸಿದ್ದರು.
“ಇದು ನನ್ನ ಪಾಲಿಗೆ ಅತ್ಯಂತ ಭಾವನಾತ್ಮಕ ವಾರವಾಗಿದೆ. ಹಲವು ವರ್ಷಗಳ ಕಾಲ ಮಾಡುತ್ತಿದ್ದ ಕಾರ್ಯದಿಂದ ದೂರ ಸರಿಯುತ್ತಿರುವುದು ಸುಲಭದ ಮಾತಲ್ಲ. ತಂಡವನ್ನು ಮುನ್ನಡೆಸಲು ಇತರರಿಗೆ ಅವಕಾಶ ನೀಡುವ ಸಮಯ ಬಂದಾಗಿದೆ. ಬ್ಲ್ಯಾಕ್ಕ್ಯಾಪ್ಸ್ ಟೆಸ್ಟ್ ಕ್ರಿಕೆಟ್ ಆಡಿದ ಪ್ರತಿಯೊಂದು ಸನ್ನಿವೇಶವನ್ನು ನಾನು ಆನಂದಿಸಿದ್ದೇನೆ. ತಂಡಕ್ಕಾಗಿ ನಾವು ಸಾಧಿಸಿರುವುದರ ಬಗ್ಗೆ ನನಗೆ ಬಹಳಾ ಹೆಮ್ಮೆ ಇದೆ,” ಎಂದು ನೀಲ್ ವ್ಯಾಗ್ನರ್ ಕಣ್ಣೀರಿಡುತ್ತಾ ಭಾವುಕರಾಗಿದ್ದಾರೆ.