ಪೀಣ್ಯ ದಾಸರಹಳ್ಳಿ: ಎಂಟನೇ ಮೈಲಿ ಕಡೆಯಿಂದ ಐಕಿಯ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಐಕಿಯಗೆ ನೀರಿನ ಸಂಪರ್ಕಕ್ಕೆ ಪೈಪ್ ಅಳವಡಿಸಲು ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದೆ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ. ರಾಮಯ್ಯ ಬಡಾವಣೆಯಿಂದ ಮೆಟ್ರೋ ನಿಲ್ದಾಣದ ಕಡೆಗೆ ಹೋಗುವ ತಿರುವಿನಲ್ಲಿ ಇರುವ ಗುಂಡಿಗೆ ಬಿದ್ದು ಸಾಕಷ್ಟು ಅವಗಡಗಳು ಸಂಭವಿಸಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಎಷ್ಟೋ ಮಂದಿ ಬಿದ್ದು ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ್ದಾರೆ ಎಂದು ಸ್ಥಳೀಯರು ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಹಾಯಕ ಎಂಜಿನಿಯರ್ ಕಾರ್ತಿಕ್ ಅವರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಅವರು ಇದಕ್ಕೆ ಸ್ಪಂದಿಸುತ್ತಿಲ್ಲ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ದುರಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.
ನಮ್ಮ ಕಣ್ಣೆದುರೇ ತಾಯಿ ಮಗು ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆಗೆ ಹೋದರು, ದಿನನಿತ್ಯ ಈ ರಸ್ತೆ ಗುಂಡಿಗೆ ಬಿದ್ದು, ಎದ್ದು ಹೋಗುತ್ತಿದ್ದಾರೆ ಯಾರೂ ಇತ್ತ ಕಡೆ ಗಮನ ಹರಿಸುತ್ತಿಲ್ಲ’ ಎಂದು ಪ್ರತ್ಯಕ್ಷದರ್ಶಿ ರಾಜಮ್ಮ ಆತಂಕಪಟ್ಟರು.
ಬೈಕ್ಗಳಲ್ಲಿ ಮತ್ತು ಕಾರುಗಳಲ್ಲಿ ಬರುವ ಜನರು ಈ ತಿರುವಿನಲ್ಲಿ ಇರುವ ದೊಡ್ಡದಾದ ಗುಂಡಿಗೆ ಚಕ್ರಗಳನ್ನು ಇಳಿಸಿ ಮೇಲೆತ್ತಲು ಹರಸಾಹಸ ಪಡುತ್ತಾರೆ. ಕೆಲವರು ಬಿದ್ದಿದ್ದಾರೆ ಹಲವು ಕಾರುಗಳಿಗೆ ಡ್ಯಾಮೇಜ್ ಆಗಿರುವ ಉದಾರಣೆಗಳು ಇದೆ. ಗುಂಡಿ ಮುಚ್ಚಲು ಇನ್ನೆಷ್ಟು ದಿನ ಬೇಕಾಗುತ್ತದೆ ಕಾದು ನೋಡಬೇಕು’ ಎಂದು ಸ್ಥಳೀಯ ನಿವಾಸಿ ಲಿಂಗಪ್ಪ ತಿಳಿಸಿದರು.