ಭಗವಾನ್ ಶಂಕರನನ್ನು ವರಿಸಲು ಘೋರ ತಪಸ್ಸು ಮಾಡಿದಾಗ ಇವಳ ಶರೀರವೆಲ್ಲಾ ಕಪ್ಪಿಟ್ಟಿತ್ತು.
ತಪಸ್ಸಿಗೆ ಸಂತುಷ್ಟನಾದ ಶಿವನು ಇವಳು ಬಿಳುಪಿನ ಮೈಕಾಂತಿಯನ್ನು ಹೊಂದುವುದಕ್ಕಾಗಿ ಗಂಗೆಯ ಪವಿತ್ರ ಜಲವನ್ನು ಇವಳ ಶರೀರದ ಮೇಲೆ ಹರಿಸಿದ್ದರಿಂದ ಮೈಯೆಲ್ಲಾ ವಿದ್ಯುತ್ತಿನ ಕಾಂತಿಯಂತೆ ಹೊಳೆಯತೊಡಗಿತು. ಮಹಾಗೌರಿಯ ವಯಸ್ಸು ಕೇವಲ ಎಂಟು ಎಂದು ತಿಳಿಯಲಾಗಿದೆ.
ಶ್ವೇತ ವೃಷಭ ವಾಹನೆಯಾಗಿರುವ ಇವಳ ಬಿಳುಪನ್ನು ಹುಣ್ಣಿಮೆಯ ಚಂದ್ರ, ಶಂಖ ಹಾಗೂ ಕಂದಪುಷ್ಪಗಳಿಗೆ ಹೋಲಿಸಲಾಗಿದೆ. ಸರ್ವಾಂಗಾಭರಣಾದಿ ಶ್ವೇತವಸ್ತ್ರ ಭೂಷಿತೆಯಾಗಿರುವ ಇವಳ ಬಲಕೈಯಲ್ಲಿ ಅಭಯಮುದ್ರೆ ಮತ್ತು ತ್ರಿಶೂಲವಿದ್ದು ಎಡಕೈಗಳಲ್ಲಿ ವರದಮುದ್ರೆ ಹಾಗೂ ಡಮರು ಇವೆ.
‘ಅಷ್ಟವರ್ಷಾ ಭವೇದ್ ಗೌರಿ’ ಯಾಗಿರುವ ಇವಳನ್ನು ಉಪಾಸಿಸಿದಾಗ ಸಂಚಿತ ಪಾಪಗಳು ತೊಳೆದುಹೋಗುತ್ತವೆ. ಸಂತಾಪ, ದು:ಖಗಳ ನಿವಾರಣೆಯಾಗುವುದು ಖಚಿತ.
ದುರ್ಗಾ ದೇವಿಯನ್ನು ನೋಡಲು ಭಯಾನಕವಾಗಿದ್ದರೂ ಆಕೆಯ, ಮಹಾಗೌರಿ ರೂಪ ಅತ್ಯಂತ ಸುಂದರ ಮತ್ತು ಸೌಮ್ಯಯುತವಾಗಿರುತ್ತದೆ. ಮಹಾಗೌರಿಯು ಸುಂದರವಾದ ಮೈಬಣ್ಣವನ್ನು ಹೊಂದಿದ್ದು, ಮುದ್ದಾದ ಮುಖವನ್ನು ಹೊಂದಿರುತ್ತಾಳೆ. ನಾಲ್ಕು ಕೈಗಳನ್ನು ಹೊಂದಿರುವ ಮಹಾಗೌರಿ ಯಾವಾಗಲೂ ಗೂಳಿಯ ಮೇಲೆ ಸವಾರಿ ಮಾಡುತ್ತಾಳೆ. ಆಕೆಯ ಮೇಲಿನ ಬಲಗೈ ಅಭಯ ಮುದ್ರೆಯಲ್ಲಿದ್ದರೆ ತಾಯಿ ಕೆಳಗಿನ ಕೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದಾಳೆ. ಮೇಲಿನ ಎಡಗೈ ಡಮರುವನ್ನು ಹಿಡಿದಿದೆ ಮತ್ತು ಕೆಳಗಿನ ಕೈ ವರ ಮುದ್ರೆಯಲ್ಲಿದೆ. ಆಕೆಯ ವಾಹನ ವೃಷಭ, ಆದ್ದರಿಂದಲೇ ತಾಯಿಯ ಈ ರೂಪವನ್ನು ವೃಷಾರೂಢ ಎಂದೂ ಕರೆಯುತ್ತಾರೆ. ಸ್ವಭಾವತಃ ಈಕೆ ಶಾಂತ ರೂಪದವಳು. ಮಹಾಗೌರಿಯ ಆಭರಣಗಳು ಮತ್ತು ಬಟ್ಟೆಗಳು ಸಹ ಬಿಳಿ ಬಣ್ಣದಲ್ಲಿರುತ್ತವೆ. ಆದ್ದರಿಂದಲೇ ಆಕೆಯನ್ನು ಶ್ವೇತಾಂಬರಧರ ಎಂದೂ ಕರೆಯುತ್ತಾರೆ.
ಬೆಳಿಗ್ಗೆ ಮುಹೂರ್ತ: ಮುಂಜಾನೆ 03.53 ರಿಂದ 05.03
– ಅಭಿಜಿತ್ ಮುಹೂರ್ತ: ಬೆಳಗ್ಗೆ 10.49 ರಿಂದ 11.38
– ವಿಜಯ ಮುಹೂರ್ತ: ಮಧ್ಯಾಹ್ನ 1.17 ರಿಂದ 02.07
– ಸಂಧ್ಯಾ ಕಾಲ: ಸಂಜೆ 05.24 ರಿಂದ 05.48 ರವರೆಗೆ
– ಸಂಜೆ ಮುಹೂರ್ತ: ಸಂಜೆ 05.24 ರಿಂದ 06.34 ರವರೆಗೆ
– ನಿಶಿತಾ ಮುಹೂರ್ತ: ರಾತ್ರಿ 10.50 ರಿಂದ 11.37 ರವರೆಗೆ.
ಈ ದಿನ ಮುಂಜಾನೆ ಬೇಗ ಎದ್ದು, ಸ್ನಾನ ಇತ್ಯಾದಿ ಮಾಡಿದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ.
– ಮಾತೆಯ ವಿಗ್ರಹವನ್ನು ಗಂಗಾಜಲದಿಂದ ಅಥವಾ ಶುದ್ಧ ನೀರಿನಿಂದ ಅಭಿಷೇಕ ಮಾಡಿ.
– ತಾಯಿಗೆ ಬಿಳಿ ಬಣ್ಣದ ಬಟ್ಟೆಗಳನ್ನು ಅರ್ಪಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿಗೆ ಬಿಳಿ ಬಣ್ಣವು ಅತ್ಯಂತ ಪ್ರಿಯವಾದ ಬಣ್ಣವಾಗಿದೆ.
– ತಾಯಿಗೆ ಅಭಿಷೇಕ ಮಾಡಿದ ನಂತರ, ಬಿಳಿ ಹೂವುಗಳನ್ನು ಅರ್ಪಿಸಿ.
– ತಾಯಿಗೆ ಅರಿಶಿನ ಕುಂಕುಮ ಹಚ್ಚಿ.
– ತಾಯಿಗೆ ಸಿಹಿತಿಂಡಿಗಳು, ಒಣ ಹಣ್ಣುಗಳು ಮತ್ತು ಹಣ್ಣುಗಳನ್ನು ಅರ್ಪಿಸಿ.
– ತಾಯಿ ಮಹಾಗೌರಿಗೆ ಪೂಜೆಯಲ್ಲಿ ಕಪ್ಪು ಕಡಲೆಯನ್ನು ನೈವೇದ್ಯ ಮಾಡಲು ಮರೆಯದಿರಿ.
– ಆದಷ್ಟು ಮಾತೆ ಮಹಾಗೌರಿಯನ್ನು ಧ್ಯಾನಿಸಿ.
– ಪೂಜೆಯ ಕೊನೆಯಲ್ಲಿ ತಾಯಿಗೆ ಆರತಿಯನ್ನೂ ಮಾಡಿರಿ.
– ಅಷ್ಟಮಿಯ ದಿನದಂದು ಕನ್ಯಾ ಪೂಜೆಗೂ ವಿಶೇಷ ಮಹತ್ವವಿದೆ. ಈ ದಿನ ಹುಡುಗಿಯರನ್ನು ಪೂಜಿಸಿ.