ನವಲಗುಂದ: ‘ಹೆಣ್ಣುಮಕ್ಕಳ ಲಿಂಗಾನುಪಾತ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ. ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನದ ಅನುಷ್ಠಾನ ಪರಿಣಾಮಕಾರಿಯಾಗಬೇಕಿದ್ದು, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೆಣ್ಣುಮಕ್ಕಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಹಶೀಲ್ದಾರ್ ಸುಧೀರ ಸಾಹುಕಾರ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮ ನಿಮಿತ್ತ ಹೆಣ್ಣು ಮಗು ಜನಿಸಿದ ಬಾಣಂತಿಯರಿಗೆ ಹೂವು, ತೆಂಗಿನ ಸಸಿ ಹಾಗು ಸಿಹಿ ನೀಡುವುದರ ಮೂಲಕ ಮಗಳನ್ನು ಉಳಿಸಿ ಮಗುವನ್ನು ಓದಿಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿಡಿಪಿಒ ಗಾಯತ್ರಿದೇವಿ ಪಾಟೀಲ ಮಾತನಾಡಿ, ‘ನವಜಾತ ಶಿಶುವಿಗೆ ತಾಯಿ ಹಾಲು ಜೀವಾಮೃತ. ಮಗುವಿಗೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿನ ನಡುವೆ ವಾತ್ಸಲ್ಯ, ಬಾಂಧವ್ಯ, ಪ್ರೀತಿ ಹೆಚ್ಚುತ್ತದೆ. ಹೆಣ್ಣು ಯಾವತ್ತೂ ಸಮಾಜಕ್ಕೆ ಹೊರೆಯಲ್ಲ’ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ರೂಪಾ ಕಿಣಗಿ ಅವರು ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಿದರು. ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ ಮಾತನಾಡಿದರು. ತಾಲ್ಲೂಕು ವೈದ್ಯಾಧಿಕಾರಿ ಎನ್.ಬಿ. ಕರ್ಲವಾಡ, ಲಕ್ಷ್ಮಿ ನ್ಯಾಮಗೌಡ, ಪದ್ಮಾ ಕಿಲ್ಲೇದಾರ, ನಾಗರತ್ನಾ ಯಲವಿಗಿ, ಸವಿತಾ ಮುನವಳ್ಳಿ, ನಂದಿನಿ ಹಾದಿಮನಿ, ಪ್ರಕಾಶ ಮೇಲಿನಮನಿ ಇದ್ದರು.