ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್ ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೆ ಅಡಿಯಿಟ್ಟಿದ್ದಾರೆ. “CWKL” ಎಂಬ ಹೆಸರಿನ ಈ ಕಬ್ಬಡಿ ಟೂರ್ನಿಯ ಲೋಗೊವನ್ನು ಇತ್ತೀಚಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅನಾವರಣ ಮಾಡಿ ಟೂರ್ನಿ ಯಶಸ್ವಿಯಾಗಲೆಂದು ಹಾರೈಸಿದರು. ಈ ಟೂರ್ನಿಯ ಬಗ್ಗೆ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನವರಸನ್ ಹೆಚ್ಚಿನ ಮಾಹಿತಿ ನೀಡಿದರು.
ಕಬ್ಬಡಿ ನಮ್ಮ ದೇಸಿ ಕ್ರೀಡೆ. ಈ ಕ್ರೀಡೆಯನ್ನು ಮಹಿಳೆಯರು ಆಡುವುದು ಕಡಿಮೆ. ಆ ನಿಟ್ಟಿನಲ್ಲೇ ಈ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸಿದ್ದೇನೆ. ಲೋಗೊವನ್ನು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಈ ಟೂರ್ನಿಯಲ್ಲಿ 10 ತಂಡಗಳಿರುತ್ತದೆ. ಸುಮಾರು 120 ಕ್ಕೂ ಅಧಿಕ ನಟಿಯರು ಪಾಲ್ಗೊಳಲಿದ್ದಾರೆ. ಹತ್ತು ತಂಡಗಳಲ್ಲಿ ಈಗಾಗಲೇ ಎಂಟು ತಂಡಗಳಿಗೆ ಮಾಲೀಕರು ದೊರಕಿದ್ದಾರೆ. ಏಪ್ರಿಲ್ ನಲ್ಲಿ ಟೂರ್ನಿ ನಡೆಯಲಿದೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ನಿರ್ಮಾಪಕರು ಈ ಟೂರ್ನಿಗೆ ಆಗಮಿಸಿ ಸ್ಪರ್ಧಿಗಳಿಗೆ ಉತ್ತೇಜನ ನೀಡಲಿದ್ದಾರೆ. ಸಾಯಿ ಗೋಲ್ಡ್ ಪ್ಯಾಲೇಸ್ ನ ಸರವಣ ಅವರು, ನಿರ್ಮಾಪಕರಾದ ಚೇತನ್ ಗೌಡ, ಸುರೇಶ್ ಗೌಡ ಹಾಗೂ ರಮೇಶ್ ರೆಡ್ಡಿ ಮುಂತಾದವರು ನಮ್ಮ ಜೊತೆಗಿರುವುದು ತುಂಬಾ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರವಣ, ಈ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ನಮ್ಮ ಸಾಯಿಗೋಲ್ಡ್ ಪ್ಯಾಲೆಸ್ ನ ಕಡೆಯಿಂದ ಹತ್ತು ಸಾವಿರ ರೂಪಾಯಿಯ ಗಿಫ್ಟ್ ವೋಚರ್ ನೀಡುವುದಾಗಿ ಹೇಳಿದರು.
ಹತ್ತು ತಂಡಗಳಲ್ಲಿ ಒಂದು ತಂಡದ ಮಾಲೀಕರಾದ “ವಾಮನ” ಚಿತ್ರದ ನಿರ್ಮಾಪಕ ಚೇತನ್ ಗೌಡ ಅವರು ನವರಸನ್ ಅವರಿಗೆ ಹತ್ತು ಲಕ್ಷದ ಚೆಕ್ ನೀಡಿದರು. ಕಬ್ಬಡಿ ಆಟದ ಕುರಿತು ಕೋಚರ್ ಶೃದಿಯಾ ರಮಣ್ ಗೌಡ ಮಾಹಿತಿ ನೀಡಿದರು. ನಟಿಯರಾದ ಸಿಂಧೂ ಲೋಕನಾಥ್, ಅಪೂರ್ವ ಹಾಗೂ ಕಾರುಣ್ಯರಾಮ್ ಮುಂತಾದ ನಟಿಯರು “CWKS” ಯಶಸ್ವಿಯಾಗಲೆಂದು ಹಾರೈಸಿದರು.