ನವಲಗುಂದ : ಪಟ್ಟಣದ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಪೂಜಾ ಮಹೋತ್ಸವ ಆರಂಭವಾಯಿತು. ಬಳಿಕ ಶ್ರೀ ಅಯ್ಯಪ್ಪನ ಭಜನೆ ನಡೆಯಿತು. ಮಧ್ಯಾಹ್ನ ಶ್ರೀ ಸ್ವಾಮಿಗೆ ಮಹಾಪೂಜೆ ಸಲ್ಲಿಕೆಯಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಜನಾ ಮಂದಿರಲ್ಲಿ ದೀಪಾರಾಧನೆ ನಡೆಯಿತು. ಶ್ರೀ ಸ್ವಾಮಿಯ ಭಾವಚಿತ್ರವಿರಿಸಿದ ಪಲ್ಲಕ್ಕಿಯೋಂದಿಗೆ ಅಯ್ಯಪ್ಪ ಮಾಲಧಾರಿಗಳು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ದೀಪ ಹೊತ್ತು ಸಾಗಿದರು.
ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಯು ಶೋಭಯಾತ್ರೆಯ ಪ್ರಮುಖ ಆಕರ್ಷಣೆಯಾಯಿತು. ಶೋಭಾಯಾತ್ರೆಯು ಅಯ್ಯಪ್ಪ ಸ್ವಾಮಿ ಸನ್ನಿಧಿಯಿಂದ ಹೊರಟು ಬಸ್ಟ್ಯಾಂಡ್, ಗಣೇಶ ಗುಡಿ, ಹಾಗೂ ಮಾರ್ಕೆಟ್ ಮುಖಾಂತರ ಸನ್ನಿಧಿಯನ್ನು ತಲುಪಿ ಪೂಜೆ ಸಲ್ಲಿಸಲಾಯಿತು. ಆಡಳಿತ ಮಂಡಳಿ, ದಾನಿಗಳಿಂದ ಸುಡುಮದ್ದು ಪ್ರದರ್ಶನ ನಡೆಯಿತು. ಭಜನ ಮಂದಿರದಲ್ಲಿ ನಿಂಗಪ್ಪ ಗುರುಸ್ವಾಮಿ ನೇತೃತ್ವದಲ್ಲಿ ಪಡಿಪೂಜೆ ನಡೆಯಿತು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಮಗನ್ ಮೋಹನ್, ಉಪಾಧ್ಯಕ್ಷ ಮಾಂತೇಶ್ ಭೋವಿ, ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಸೇರಿದಂತೆ ನಗರದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ತೀರ್ಥ ಪ್ರಸಾದ ಸ್ವೀಕರಿಸಿ ಪುನಿತರಾದರು.