2023ರ ವರ್ಷ ಮುಗಿದಿದ್ದು ವಿಶ್ವ ಕ್ರಿಕೆಟ್ನ ಎಲ್ಲಾ ಆಟಗಾರರು 2024ರಲ್ಲಿ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಇದರ ನಡುವೆ ಐಸಿಸಿ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಮಾತನಾಡಿದ್ದು, 2024 ರಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಆಝಮ್ ಅತಿ ಹೆಚ್ಚು ರನ್ ಗಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನಾಸರ್ ಹುಸೇನ್ ಅವರು ತಮ್ಮ ಮೊದಲ ಆಯ್ಕೆಯಾಗಿ ವಿರಾಟ್ ಕೊಹ್ಲಿಗೆ ಸ್ಥಾನ ಕಲ್ಪಿಸಿದ್ದಾರೆ. 2023ರಲ್ಲಿ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿ ಅಲ್ಲದೆ ಇಡೀ ವರ್ಷ ಉತ್ತಮ ಫಾರ್ಮ್ ನಲ್ಲಿದ್ದು ರನ್ ಶಿಖರ ನಿರ್ಮಿಸಿದ್ದರು.
“ನಿಜಕ್ಕೂ ವಿರಾಟ್ ಕೊಹ್ಲಿಯೇ ನನ್ನ ಮೊದಲ ಆಯ್ಕೆಯಾಗಿದ್ದಾರೆ. ಅವರು 2023ರಲ್ಲಿ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಈ ವರ್ಷ ಕೊಹ್ಲಿ ಬಹುತೇಕ ದಾಖಲೆಗಳನ್ನು ಮುರಿದು ಗಮನ ಸೆಳೆದಿದ್ದಾರೆ. ಅಲ್ಲದೆ ಅವರ ಬ್ಯಾಟಿಂಗ್ ಮತ್ತಷ್ಟು ಆಕರ್ಷಿಸಿತು. ವಿರಾಟ್ ಕೊಹ್ಲಿ ಈ ರೀತಿ ಬ್ಯಾಟಿಂಗ್ ಪರಾಕ್ರಮ ತೋರಿದ್ದನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಮುಂಬೈನಲ್ಲಿ ಶ್ರೀಲಂಕಾ ವಿರುದ್ಧದ ಅವರ ಬ್ಯಾಟ್ ಘರ್ಜಿಸಿರುವುದು, ಕೊಹ್ಲಿಯ 5 ಉತ್ತಮ ಇನಿಂಗ್ಸ್ಗಳಲ್ಲಿ ಒಂದು ಎಂಬುದು ನನ್ನ ಭಾವನೆಯಾಗಿದೆ. ಇದು ವಿರಾಟ್ ಕೊಹ್ಲಿ, ಭಾರತ ತಂಡ ಹಾಗೂ ಆತನ ಅಭಿಮಾನಿಗಳಿಗೆ ಉತ್ತಮ ಸೂಚನೆಯಾಗಿದೆ. ಅದರ ಅರ್ಥ ಆತನ ಮಾನಸಿಕ ಸ್ಥೈರ್ಯ ಉತ್ತಮ ಮಟ್ಟದಲ್ಲಿದ್ದು, ಉತ್ತಮ ಆಟವನ್ನು ಆಡುತ್ತಿದ್ದಾರೆ ಎಂದಾಗಿದೆ,” ಎಂದು ನಾಸರ್ ಹುಸೇನ್ ಹೇಳಿದ್ದಾರೆ.