ರಾಯಚೂರು:– ನರೇಂದ್ರ ಮೋದಿ ಅವರನ್ನು 3ನೇ ಬಾರಿ ಪ್ರಧಾನ ಮಂತ್ರಿ ಆಗದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾಗಿ ಅಲೆಯಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಆತಂಕದಲ್ಲಿದ್ದಾರೆ. ರಾಮಮಂದಿರ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನಡವಳಿಕೆಯನ್ನು ಮತದಾರರು ಗಮನಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ ತಕ್ಷಣ ಗ್ಯಾರಂಟಿಗಳು ಜನರಿಗೆ ತಲುಪಿದೆ ಅಂತಲ್ಲ.
ಮುಂದೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡುತ್ತಾರೆ ಎಂದರು. ಒಂದೆಡೆ ಮೂವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಅಂತ ಅವರ ಪಕ್ಷದ ನಾಯಕರೇ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ಈ ಸರ್ಕಾರ ಬಂದಮೇಲೆ ಒಂದು ಅಭಿವೃದ್ಧಿ ಕೆಲಸವೂ ಆಗಿಲ್ಲ ಎಂದು ಜನರು ಶಾಪ ಹಾಕುತ್ತಿದ್ದಾರೆ. ಆದರೆ, ಬರಗಾಲದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲದಲ್ಲಿ ತ್ರಿಪೇಸ್ ವಿದ್ಯುತ್ ಕೊಡಲು ಸರ್ಕಾರಕ್ಕೆ ಆಗಿಲ್ಲ. ಇದು ಜನ ವಿರೋಧಿ, ಬಡವರ ವಿರೋಧಿ, ರೈತ ವಿರೋಧಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಲ್ಪಸಂಖ್ಯಾತರು ಬೇಸರ ಆಗುತ್ತಾರೆ ಎಂಬ ಭಯ ಅವರಿಗಿದೆ. ಮುಖ್ಯಮಂತ್ರಿ ನಡೆ ನೋಡಿದರೆ ಅಲ್ಪಸಂಖ್ಯಾತರ ಮತವನ್ನಷ್ಟೆ ಪಡೆದು ಅಧಿಕಾರಕ್ಕೆ ಬಂದಿದ್ದಾರಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ದಿನ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಬೇಕು ಎನ್ನುತ್ತಾರೆ. ಮತ್ತೊಂದೆಡೆ ಆಮಂತ್ರಣ ಪತ್ರಿಕೆ ಬಂದಿಲ್ಲ ಎನ್ನುತ್ತಾರೆ. ಯಾರಿಗೆ ಆಹ್ವಾನ ಬಂದಿದೆ, ಅವರು ನಾನು ಹೋಗುವುದಿಲ್ಲ ಎಂದು ತೀರ್ಮಾನ ಮಾಡುತ್ತಾರೆ. ಈ ರೀತಿಯಾಗಿ ದೆಹಲಿಯಿಂದ ಬೆಂಗಳೂರುವರೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಗೊಂದಲಮಯವಾಗಿದೆ ಎಂದು ಹೇಳಿದರು.
ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಬರುವುದು ಖಾತ್ರಿಯಾಗಿದೆ. ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನ ಮಂತ್ರಿ ಆಗದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.