ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದಂಬಾರಿಯಲ್ಲಿ ವಿರಾಜಮಾನವಾಗಿ ಮೆರವಣಿಗೆ ಸಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ಕಾತರರಾಗಿದ್ದಾರೆ. ಜೊತೆಗೆ ಜಂಬೂಸವಾರಿ (Jamboo Savari) ಮೆರವಣಿಗೆ ಸೊಬಗನ್ನು ನೋಡಲು ದೇಶ-ವಿದೇಶದ ಪ್ರವಾಸಿಗರು ಕಾದಿದ್ದಾರೆ.
ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡುವುದು ಪದ್ಧತಿ. ಅದರಂತೆ ಶನಿವಾರ ಮಧ್ಯಾಹ್ನ 1:41 ರಿಂದ 2:10 ರ ವರೆಗೆ ಸಲ್ಲುವ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜ ಪೂಜೆ ನೆರವೇರಿಸಿ ಚಾಲನೆ ಕೊಡಲಿದ್ದಾರೆ. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಕೆ ಆಗಲಿದೆ. ಬಳಿಕ ನಂದಿಧ್ವಜವನ್ನು ಹಿಡಿದು ಕಲಾವಿದರು ಜಂಬೂಸವಾರಿ ಮೆರವಣಿಗೆ ಜೊತೆಗೆ ಸಾಗಲಿದ್ದಾರೆ. ಜಂಬೂಸವಾರಿಗೆ ಮೆರವಣಿಗೆಯಲ್ಲಿ ಮೊದಲು ಸಾಗುವುದೇ ನಂದಿಧ್ವಜ ಕಲಾತಂಡ.
ನಂದಿಧ್ವಜ ಪೂಜೆ ಬಳಿಕ ಇತ್ತ ಅರಮನೆ ಒಳಗಡೆ ಚಿನ್ನದಂಬಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಶನಿವಾರ ಸಂಜೆ 4 ರಿಂದ 4:30ರ ವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಅರಮನೆ ಆವರಣದಲ್ಲಿ ಅಭಿಮನ್ಯು ಹೊರುವ 750 ಕೆಜಿ ತೂಕದ ಚಿನ್ನದಂಬಾರಿಯಲ್ಲಿ ವಿರಾಜಮಾನಗೊಂಡ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುವುದು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು ಹಾಗೂ ಮೈಸೂರು ಮಹಾನಗರ ಪಾಲಿಕೆ ಮೇಯರ್, ಮೈಸೂರು ಜಿಲ್ಲಾಧಿಕಾರಿ ಪಾಲ್ಗೊಳ್ಳಲಿದ್ದಾರೆ. ಅರಮನೆ ಆವರಣದಲ್ಲಿ ಗಣ್ಯರು, ಆಹ್ವಾನಿತರು, ಗೋಲ್ಡ್ ಕಾರ್ಡ್, ಟಿಕೆಟ್ ಇರುವವರಿಗೆ ಆಸನ ವ್ಯವಸ್ಥೆ ಇರಲಿದೆ. ಅರಮನೆಯಿಂದ ಬನ್ನಿಮಂಟಪದ ವರೆಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಲಿದೆ.
52 ಕಲಾತಂಡ ಭಾಗಿ
ಜಂಬೂಸವಾರಿ ಮೆರವಣಿಗೆಯಲ್ಲಿ ನಾದಸ್ವರ, ವೀರಗಾಸೆ, ಕಂಸಾಳೆ, ಕೋಲಾಟ, ತಮಟೆ ನಗಾರಿ, ಯಕ್ಷಗಾನ, ಹಲಗೆ ಮೇಳ, ಕಣಿ ವಾದನ, ಹೂವಿನ ನೃತ್ಯ, ಹೆಜ್ಜೆ ಮೇಳ, ಚಿಟ್ ಮೇಳ, ಡೊಳ್ಳು ಕುಣಿತ, ಕೀಲು ಕುದುರೆ, ಬೊಂಬೆಗಳ ವೇಷ ಮೊದಲಾದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 52 ಕಲಾತಂಡಗಳು ಭಾಗಿಯಾಗಲಿವೆ. ಪೊಲೀಸ್ ತುಕಡಿಗಳು, ಸ್ತಬ್ದಚಿತ್ರಗಳು, ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಮೆರವಣಿಗೆಯು 5 ಕಿಮೀ ಸಾಗಿ ಬನ್ನಿಮಂಟಪಕ್ಕೆ ತಲುಪಲಿದೆ.
ಮೆರವಣಿಗೆ ಸಾಗುವ ಮಾರ್ಗ
ದಸರಾ ಜಂಬೂಸವಾರಿ ಮೆರವಣಿಗೆಯು ಅರಮನೆಯ ಬಲರಾಮ ದ್ವಾರದಿಂದ ಹೊರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ಆಸ್ಪತ್ರೆ, ಬಂಬೂಬಜಾರ್, ಹೈವೇ ವೃತ್ತದ ಮೂಲಕ ಸಾಗುತ್ತದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಮೆರವಣಿಗೆ ಕೊನೆಗೊಳ್ಳಲಿದೆ. ಅಂಬಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿರುತ್ತಾರೆ. ಕಲಾತಂಡಗಳು ಹಾಗೂ ಗಜಪಡೆ, ಚಿನ್ನದಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳುತ್ತಾರೆ.
ಜಂಬೂಸವಾರಿ ಮೆರವಣಿಗೆ ಮುನ್ನಡೆಸುತ್ತಾನೆ ‘ಧನಂಜಯ’
ಮೈಸೂರು ದಸರಾದ ಜಂಬೂಸವಾರಿ ಮೆರವಣಿಗೆ ಮುನ್ನಡೆಸುವ ಜವಾಬ್ದಾರಿಯನ್ನು ಧನಂಜಯ ಆನೆ ನಿಭಾಯಿಸಲಿದೆ. ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಎಲ್ಲರಿಗಿಂತ ಮುಂಚೂಣಿಯಲ್ಲಿ ಧನಂಜಯ ಸಾಗಲಿದ್ದಾನೆ. ಕಳೆದ ವರ್ಷ ದಸರಾದಲ್ಲಿ ನಿಶಾನೆ ಆನೆಯಾಗಿ ಅರ್ಜುನ ಮೆರವಣಿಗೆ ಮುನ್ನಡೆಸಿದ್ದ. ಆದರೆ ಅರ್ಜುನನ ಅಕಾಲಿಕ ಸಾವಿನಿಂದಾಗಿ, ಆ ಜವಾಬ್ದಾರಿಯನ್ನು ಈ ಬಾರಿ ಧನಂಜಯನಿಗೆ ಹೊರಲಿಸಲಾಗಿದೆ
5ನೇ ಬಾರಿ ಚಿನ್ನದಂಬಾರಿ ಹೊರುತ್ತಾನೆ ಅಭಿಮನ್ಯು
ನಾಳೆ ನಡೆಯಲಿರುವ ವಿಜಯದಶಮಿ ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯುವಿನ ಎಡಬಲದಲ್ಲಿ ಹಿರಣ್ಯ ಹಾಗೂ ಲಕ್ಷ್ಮಿ ಕುಮ್ಕಿ ಆನೆಗಳಾಗಿ ಸಾಥ್ ನೀಡಲಿವೆ. ನೌಫತ್ ಆನೆಯಾಗಿ ಗೋಪಿ ಸಾಗಲಿದ್ದಾನೆ.
ಜಂಬೂಸವಾರಿ ಪೂರ್ಣಗೊಂಡ ಬಳಿಕ ಬನ್ನಿಮಂಟಪ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಲಿದೆ. ಪಂಜಿನ ಕವಾಯತಿನಲ್ಲಿ ಬೈಕ್ಗಳಲ್ಲಿ ವಿವಿಧ ಸ್ಟಂಟ್ಗಳ ಪ್ರದರ್ಶನ ಇರಲಿದೆ. ಬೈಕ್ ಸ್ಟಂಟ್ಗಳು ಮೈ ಜುಮ್ಮೆನಿಸುವಂತಿರುತ್ತದೆ. ಬೈಕ್ಗಳಲ್ಲಿ ಸಿಬ್ಬಂದಿ ನಿಂತು ಪಿರಮಿಡ್ ಮಾದರಿಯಲ್ಲಿ ಸಾಗುತ್ತಾರೆ. ಫೈರ್ ಜಂಪ್, ಶ್ವೇತ ಅಶ್ವ ಜಂಪ್, ಟ್ಯೂಬ್ ಲೈಟ್ ಜಂಪ್, ಸರ್ಕಲ್ ಎಕ್ಸ್ಸೈಜ್, ಓಪನಿಂಗ್ ಕ್ರಾಸಿಂಗ್, ಪ್ಯಾರಲ್ ಕ್ರಾಸಿಂಗ್, ಗ್ರೂಪ್ ಈವೆಂಟ್ ಸೇರಿದಂತೆ ವಿವಿಧ ಕಸರತ್ತು ಪ್ರದರ್ಶನ ಇರಲಿದೆ.