ವಿಜಯನಗರ:- ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವ ಅದ್ದೂರಿಯಾಗಿ ಜರಗಿದ್ದು, ಈ ವೇಳೆ ಐತಿಹಾಸಿಕ ಮೈಲಾರ ಲಿಂಗೇಶ್ವರ ಕಾರ್ಣಿಕ ಭವಿಷ್ಯವಾಣಿ ರಾಜ್ಯದ ರೈತರ ಮುಖದಲ್ಲಿ ಸಂತಸ ತಂದಿದೆ.
ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವೃತವನ್ನು ಆಚರಿಸಿದ ರಾಮಪ್ಪ ಗೊರವಯ್ಯ, ಸೋಮವಾರ ಸಂಜೆ 5:30ಕ್ಕೆ ಹದಿನೈದು ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೇ ಎನ್ನುತ್ತಲೇ ಸಂಪಾಯಿತಲೇ ಪರಾಕ್ ಎಂದು ಕಾರ್ಣಿಕವಾಣಿ ನುಡಿದಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿ ಹೇಳಿರುವಂತ ಜನರು ಈ ಸಲ ಭಾರೀ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈ ಬಾರಿಯಂತೆ ಬರಗಾಲ ಕಡಿಮೆಯಾಗಲಿದೆ. ಮಳೆ ಬೆಳೆ ಚೆನ್ನಾಗಿ ಆಗಲಿದೆ. ಸುಭಿಕ್ಷೆಯಿಂದ ರೈತರು ಸಂತಸ ಪಡಲಿದ್ದಾರೆ ಎಂಬುದಾಗಿ ಕಾರ್ಣಿಕ ನುಡಿಯ ಅರ್ಥವಾಗಿದೆ.
ವಿಜಯನರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನ ಮರಡಿಯಲ್ಲಿ ಪ್ರತಿ ವರ್ಷ ಗೊರವಯ್ಯನ ಕಾರ್ಣಿಕ ಕೇಳಲು ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಗೊರವಯ್ಯ ಒಂಬತ್ತು ದಿನಗಳ ಕಾಲ ಉಪವಾಸ ಇದ್ದು ಕಾರ್ಣಿಕ ನುಡಿ ಹೇಳುತ್ತಾರೆ. ಅದರಂತೆ ಈ ವರ್ಷವೂ ಸಹ ಕಾರ್ಣಿಕನ ಕೇಳಲು ಲಕ್ಷಾಂತರ ಜನ ನೆರೆದಿದ್ದರು.
ಪ್ರತಿ ವರ್ಷ ಭರತ ಹುಣ್ಣಿಮೆ ಸಮಯದಲ್ಲಿ ಮೈಲಾರದ ಮೈಲಾರಲಿಂಗೇಶ್ವರನ ಜಾತ್ರೆ ನಡೆಯುತ್ತದೆ. ಜಾತ್ರೆ ಪ್ರಯುಕ್ತ ಭರತ ಹುಣ್ಣಿಮೆಯ ಎರಡು ದಿನಗಳ ನಂತರ ಮೈಲಾರದ ಡೆಂಕನಮರಡಿಯಲ್ಲಿ ವರ್ಷದ ಭವಿಷ್ಯವಾಣಿ ಎಂದು ನಂಬಿಕೊಂಡು ಬಂದಿರುವ ಕಾರ್ಣಿಕೋತ್ಸವ ನಡೆಯುತ್ತದೆ
ಮೈಲಾರಲಿಂಗೇಶ್ವರನ 2024ರ ಕಾರ್ಣಿಕ ವಾಣಿ ಬರದಿಂದ ಕಂಗಾಲಾಗಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 2023ರಲ್ಲಿನ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ನಾಡಿನ ರೈತರು ಅಕ್ಷರಶಃ ಕಂಗಾಲಾಗಿದ್ದರು. ಎರಡು, ಮೂರು ಬಿತ್ತನೆ ಮಾಡಿದರೂ ಮಾಡಿದ ಖರ್ಚು ಬಾರದಂತಾಗಿ ರೈತರು ದಿಕ್ಕು ತೋಚದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೇಸಿಗೆಗೂ ಮುನ್ನವೇ ನಾಡಿನ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಆದರೆ ಮೈಲಾರದಲ್ಲಿ ರಾಮಪ್ಪ ಗೊರವಯ್ಯ ನುಡಿದ ಮೈಲಾರಲಿಂಗೇಶ್ವರನ ಕಾರ್ಣಿಕ ನೆರೆದಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತು
ಮೈಲಾರಲಿಂಗೇಶ್ವರನ ಕಾರ್ಣಿಕವಾಣಿಯನ್ನು ಆಲಿಸಲು ಮೈಲಾರಕ್ಕೆ ಆಗಮಿಸಿದ್ದ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬರಗಾಲದಿಂದ ರೈತಾಪಿ ವರ್ಗದ ಜನರು ಸೇರಿದಂತೆ ನಾಡಿನ ಜನರು ಬರಗಾಲವನ್ನು ಅನುಭವಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಅನುಕೂಲ ಆಗಲಿದೆ. ಭವಿಷ್ಯದ ದಿನಗಳಲ್ಲಿ ಮಳೆ ಬೆಳೆ ಸಮೃದ್ಧಿಯಿಂದ ಕೂಡಿರಲಿದೆ ಎಂದು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)