ಭಾರತೀಯ ಷೇರುಪೇಟೆಯಲ್ಲಿ ಕಳೆದ ಕೆಲವು ವಾರಗಳಿಂದ ಸರಣಿ ಐಪಿಒಗಳು ಬರುತ್ತಿವೆ. ಈ ಷೇರುಗಳಿಗೆ ಲಿಸ್ಟಿಂಗ್ ಬಳಿಕ ಭಾರೀ ಬೇಡಿಕೆಯೂ ಕಂಡು ಬರುತ್ತಿದ್ದು, ಹೂಡಿಕೆದಾರರೂ ಬಂಪರ್ ಲಾಭ ಗಳಿಸುತ್ತಿದ್ದಾರೆ. ಇದೀಗ ಟಾಟಾ ಟೆಕ್ನಾಲಜೀಸ್, ಐಆರ್ಇಡಿಎನಂತಹ ಯಶಸ್ವಿ ಐಪಿಒಗಳ ಬಳಿಕ ಮುತ್ತೂಟ್ ಮೈಕ್ರೋಫಿನ್ ಷೇರುಪೇಟೆಯಲ್ಲಿ ಅಗ್ರ ಸ್ಥಾನ ಇದೆ.
ಐಪಿಒದಿಂದ ಮುತ್ತೂಟ್ ಮೈಕ್ರೋಫಿನ್ 960 ಕೋಟಿ ರೂ. ಸಂಗ್ರಹಿಸಲು ಹೊರಟಿದೆ. ಸಂಸ್ಥೆಯು 10 ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 277 ರಿಂದ 291 ರೂ. ಬೆಲೆ ನಿಗದಿಪಡಿಸಿದೆ. ಮುತ್ತೂಟ್ ಮೈಕ್ರೋಫಿನ್ ಐಪಿಒ ಚಂದಾದಾರಿಕೆಯು ಆರಂಭವಾಗಿದ್ದು, ಡಿಸೆಂಬರ್ 20ರಂದು ಬುಧವಾರದಂದು ಮುಕ್ತಾಯವಾಗಲಿದೆ. ಮುತ್ತೂಟ್ ಐಪಿಒದಲ್ಲಿ ಆಂಕರ್ ಹೂಡಿಕೆದಾರರಿಗೆ ಚಂದಾದಾರಿಕೆಯು ಆರಂಭವಾಗಲಿದೆ.
ಮುತ್ತೂಟ್ ಮೈಕ್ರೋಫಿನ್ ಐಪಿಒ ಪ್ರಾರಂಭಿಸಲು ಅಕ್ಟೋಬರ್ ತಿಂಗಳಿನಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯು ಅನುಮತಿ ನೀಡಿತ್ತು. ಮುತ್ತೂಟ್ ಮೈಕ್ರೋಫಿನ್ ಮುತ್ತೂಟ್ ಫೈನಾನ್ಸ್ನ ಮುಖ್ಯ ಅಂಗಸಂಸ್ಥೆಯಾಗಿದೆ.
ಇದೀಗ ಮತ್ತೆ ಸಂಸ್ಥೆ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಮುತ್ತೂಟ್ ಮೈಕ್ರೋಫಿನ್ ಲಿಮಿಟೆಡ್ ತನ್ನ ಐಪಿಒದಲ್ಲಿ 760 ಕೋಟಿ ರೂ. ಮೊತ್ತದ ಹೊಸ ಷೇರುಗಳನ್ನು ಮಾರಾಟ ಮಾಡಲಿದ್ದು, ಪ್ರವರ್ತಕರು ಮತ್ತು ಇತರರು 200 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಲಿದ್ದಾರೆ.
ಪ್ರವರ್ತಕರಾದ ಥಾಮಸ್ ಜಾನ್ ಮುತ್ತೂಟ್ (16.36 ಕೋಟಿ ರೂ.), ಥಾಮಸ್ ಮುತ್ತೂಟ್ (16.38 ಕೋಟಿ ರೂ.), ಥಾಮಸ್ ಜಾರ್ಜ್ ಮುತ್ತೂಟ್ (16.36 ಕೋಟಿ ರೂ.), ಪ್ರೀತಿ ಜಾನ್ ಮುತ್ತೂಟ್ (33.74 ಕೋಟಿ ರೂ.), ರೆಮ್ಮಿ ಥಾಮಸ್ (33.3 ಕೋಟಿ ರೂ.), ನೀನಾ ಜಾರ್ಜ್ (33.76 ಕೋಟಿ ರೂ.) ಷೇರುಗಳನ್ನು ಮಾರಾಟ ಮಾಡಲಿದ್ದರೆ, ಹೂಡಿಕೆದಾರರಲ್ಲಿ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ 50 ಕೋಟಿ ರೂ.ವರೆಗಿನ ಮೊತ್ತದ ಷೇರುಗಳನ್ನು ಮಾರಾಟ ಮಾಡಲಿದೆ.