ಬೆಳವಾಗಿ : ಸಂಬಂಧವೇ ಇಲ್ಲದ ಜಮೀನಿಗಾಗಿ ಸುಪಾರಿ ನೀಡಿ, ಹತ್ಯೆ ಮಾಡಿಸಿ ಅಪಘಾತ ಅಂತಾ ಬಿಂಬಿಸಿದವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಣ್ಣರಾಮಪ್ಪ ಅತ್ತಾರ (65) ಕೊಲೆಯಾಗಿದ್ದ ವ್ಯಕ್ತಿ. ಕಳೆದ ಫೆ.25ರಂದು ಕಟಕೋಳ ಹತ್ತಿರ ಸಣ್ಣರಾಮಪ್ಪ ಬೈಕ್ನಲ್ಲಿ ಬರೋವಾಗ ಓಮಿನಿ ವಾಹನ ಗುದ್ದಿ ಸಾವನ್ನಪ್ಪಿದ್ದರು. ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಅಪಘಾತವಾಗಿದ್ದ ಸ್ಥಿತಿ ಕಂಡು ಅನುಮಾನ ಮೂಡಿತ್ತು.ಇದರಿಂದಾಗಿ ಪೊಲೀಸರು ತನಿಖೆ ನಡೆಸಿದಾಗ ಅಪಘಾತ ಅಲ್ಲಾ ಕೊಲೆ ಎಂಬುದು ಬಹಿರಂಗವಾಗಿದೆ. ಶಂಕರ್ ಜಾಧವ್ ಎಂಬಾತನಿಂದಲೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಕೊಲೆ ಮಾಡಿದ ಮತ್ತು ಕೊಲೆಯಾದ ವ್ಯಕ್ತಿಗೆ ಸಂಬಂಧ ಇಲ್ಲದ ಜಮೀನಿಗಾಗಿ ಕಿತ್ತಾಟ ನಡೆದಿತ್ತು. ಮಹಾರಾಷ್ಟ್ರ ಮೂಲದ ಘಾಟಗೆ ಎಂಬುವವರಿಗೆ ಸೇರಿದ್ದ 7ಎಕರೆ 2ಗುಂಟೆ ಜಮೀನನ್ನು ಆರೋಪಿ ಶಂಕರ್ ನೋಡಿಕೊಳ್ಳುತ್ತಿದ್ದ. ಅಲ್ಲದೇ ಪಾಲುದಾರಿಕೆಯಲ್ಲಿ ಮಾಡುತ್ತಿದ್ದ ಜಮೀನಿನ್ನೇ ಲಪಟಾಯಿಸಲು ಮುಂದಾಗಿದ್ದ. ಈ ವಿಚಾರ ತಿಳಿದು ಮೂಲ ಮಾಲೀಕ ಮೃತ ಸಣ್ಣರಾಮಪ್ಪನಿಗೆ ಜಮೀನು ನೀಡಲು ಮುಂದಾಗಿದ್ದರು.
ಈ ವಿಚಾರ ಗೊತ್ತಾಗಿದ್ದೇ ಶಂಕರ್ ಸಣ್ಣರಾಮಪ್ಪ ಕೊಲೆಗೆ ಎರಡೂವರೆ ಲಕ್ಷಕ್ಕೆ ಸುಪಾರಿ ನೀಡಿದ್ದಾನೆ. ಚಿಕ್ಕೋಡಿಯಲ್ಲಿ ಮೆಸ್ ನಡೆಸುತ್ತಿದ್ದ ಸುಲ್ತಾನ್ ಕಿಲ್ಲೇದಾರ್ ಗೆ ಸುಪಾರಿ ನೀಡಿದ್ದಾನೆ. ಪಕ್ಕಾ ಪ್ಲ್ಯಾನ್ ಮಾಡಿ ಐದು ಜನರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಓಮಿನಿಯಿಂದ ಗುದ್ದಿಸಿ ಪರಾರಿಯಾಗಿದ್ದರು. ಓಮಿನಿ ಓಡಾಡುವ ದೃಶ್ಯ ಗ್ರಾಮದ ಕೆಲ ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಬೆನ್ನು ಬಿದ್ದ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ. ಆರೋಪಿ ಶಂಕರ್ ಜಾಧವ್, ಸುಪಾರಿ ಪಡೆದ ಸುಲ್ತಾನ್ ಕಿಲ್ಲೇದಾರ್, ರಾಹುಲ್, ಟಿಪ್ಪು ಮುಜಾವರ್ ಬಂಧನವಾಗಿದೆ. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು