ಮುಂಬೈ: ಅಚ್ಚರಿ ಬೆಳವಣಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿಯು 2024ರ ಐಪಿಎಲ್ ಆವೃತ್ತಿಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ನೇಮಿಸಿದೆ. ಪಾಂಡ್ಯ ಅವರನ್ನು ಹೊಸ ನಾಯಕ ಎಂದು ಘೋಷಿಸಿದ 1 ಗಂಟೆಯೊಳಗೆ ಮುಂಬೈ ಇಂಡಿಯನ್ಸ್ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ 4,00,000 ಫಾಲೋವರ್ಸ್ (Followers) ಕಳೆದುಕೊಂಡಿದೆ.
ರೋಹಿತ್ ಶರ್ಮಾ (Rohit Sharma) ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ವಿಷಯ ತಿಳಿಯುತ್ತಿದ್ದಂತೆ ನಿರಾಸೆ ಹೊಂದಿದ ಅಭಿಮಾನಿಗಳು ಮುಂಬೈ ಫ್ರಾಂಚೈಸಿಗೆ ಗುಡ್ಬೈ ಹೇಳಿದ್ದಾರೆ
10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿರುವ ರೋಹಿತ್ ಶರ್ಮಾ 2013, 2015, 2017, 2019 ಹಾಗೂ 2020ರ ಆವೃತ್ತಿಗಳಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದಿದ್ದರು. ಪ್ರಸಕ್ತ ವರ್ಷದ ಐಪಿಎಲ್ ಆವೃತ್ತಿಯಲ್ಲೂ ಪ್ಲೇ ಆಫ್ ತಲುಪಿತ್ತು
ಇನ್ನೂ 2022ರಲ್ಲಿ ಗುಜರಾತ್ ಟೈಟಾನ್ಸ್ (Gujarat Taitans) ತಂಡ ಸೇರಿದ್ದ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡದ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು. 2023ರ ಐಪಿಎಲ್ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು ರನ್ನರ್ ಅಪ್ ಪ್ರಶಸ್ತಿ ತಂದುಕೊಟ್ಟಿದ್ದರು. ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿರುವ ಪಾಂಡ್ಯ 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. 10 ವರ್ಷ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುವರೇ ಎಂದು ಕಾದು ನೋಡಬೇಕಾಗಿದೆ.
ಹಾರ್ದಿಕ್ ಪಾಂಡ್ಯ ಆಯ್ಕೆಯನ್ನು ಫ್ರಾಂಚೈಸಿಯ ಗ್ಲೋಬಲ್ ಮುಖ್ಯಸ್ಥ ಮಹೇಲಾ ಜಯವರ್ಧನೆ ಶ್ಲಾಘಿಸಿದ್ದಾರೆ. ಇದು ಪರಂಪರೆ ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯದ ನಿರ್ಧಾರವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ