ಮುಂಬೈ:– ಸಂಕಷ್ಟದಲ್ಲಿರುವ ಪೇಟಿಎಂ ನನ್ನು ಖರೀದಿ ಮಾಡಲು ಮುಕೇಶ್ ಅಂಬಾನಿ ಚಿಂತನೆ ನಡೆಸಿದ್ದಾರೆ. ಮಾರ್ಚ್ 1ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್, ಫಾಸ್ಟ್ಟ್ಯಾಗ್ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸಿದೆ.
ಇದರಿಂದಾಗಿ ಪೇಟಿಎಂ ಸಂಕಷ್ಟಕ್ಕೆ ಸಿಲುಕಿದ್ದು, ಷೇರುಗಳ ಮೌಲ್ಯವೂ ಪಾತಾಳಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಪೇಟಿಎಂ ಖರೀದಿಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬೆನ್ನಲ್ಲೇ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಷೇರುಗಳ ಮೌಲ್ಯವು ಶೇ.14ರಷ್ಟು ಏರಿಕೆಯಾಗಿದೆ.
ಪೇಟಿಎಂ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ಜತೆ ರಿಲಯನ್ಸ್ ಗ್ರೂಪ್ನ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಮಾತುಕತೆ ನಡೆಸುತ್ತಿವೆ. ಆರ್ಬಿಐ ನಿರ್ಬಂಧಕ್ಕೀಡಾಗಿರುವ ಪೇಟಿಎಂ ವ್ಯಾಲೆಟ್ ಖರೀದಿಗೆ ಚಿಂತನೆ ನಡೆದಿದೆ. ಹಾಗಾಗಿ, ಜಿಯೋ ಫೈನಾನ್ಶಿಯಲ್ ಸರ್ವಿಸಸ್ನ ಒಂದು ಷೇರಿನ ಮೌಲ್ಯ ಬಿಎಸ್ಇನಲ್ಲಿ 288.75 ರೂಪಾಯಿಗೆ ಏರಿಕೆಯಾಗಿದೆ. ಆದಾಗ್ಯೂ, ಪೇಟಿಎಂ ರಿಲಯನ್ಸ್ ತೆಕ್ಕೆಗೆ ಸೇರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಕಳೆದ ನವೆಂಬರ್ನಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಖರೀದಿಗೆ ರಿಲಯನ್ಸ್ ಮಾತಕತೆ ನಡೆಸಲಾಗುತ್ತಿತ್ತು. ಆದರೆ, ಆರ್ಬಿಐ ನಿಷೇಧ ಹೇರಿದ ಬಳಿಕ ಎಚ್ಡಿಎಫ್ಸಿಯು ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.