ಸೋಮವಾರವಷ್ಟೇ (ಜ.22) ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆಯಾದ ಪರ್ವದಿನ. ಅದೇ ಶುಭ ಮುಹೂರ್ತದಲ್ಲಿ ಆಂಜನೇಯನ ಜನ್ಮಭೂಮಿಯಾದ ಅಂಜನಾದ್ರಿಯಲ್ಲಿ ‘ಅಯೋಧ್ಯೆ ರಾಮ’ (Ayodhya Ram) ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶಾಸಕ ಗಾಲಿ ಜನಾರ್ದನ ರೆಡ್ಡಿ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಈ ಹಿಂದೆ ಶ್ರೀಜಗನ್ನಾಥ ದಾಸರು, ಶ್ರೀ ಪ್ರಸನ್ನವೆಂಕಟದಾಸರು ಸೇರಿದಂತೆ ಅನೇಕ ದಾಸವರೇಣ್ಯರ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಜನಪ್ರಿಯರಾಗಿರುವ ಮಧುಸೂದನ್ ಹವಾಲ್ದಾರ್ (Madhusudan Havaldar) ತಮ್ಮ ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಲ್ಲದೆ ನಿರ್ದೇಶನವನ್ನು ಮಾಡುತ್ತಿದ್ದಾರೆ.
ಇಂದಿನಿಂದ ಈ ಪೌರಾಣಿಕ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಸೇರಿದಂತೆ ಹನ್ನೆರಡು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ವಿಕ್ರಮ್ ಜೋಶಿ ಈ ಚಿತ್ರದ ನಾಯಕನಾಗಿ ಹಾಗೂ ಶ್ರೀಲತ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಚಿತ್ರರಂಗದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.