ಬೆಂಗಳೂರು:- ಕರ್ನಾಟಕದಲ್ಲಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಮುಡಾ ಹಗರಣ ಸದ್ದು ಮಾಡುತ್ತಿದೆ. ಅಲ್ಲದೇ ಈ ಪ್ರಕರಣದಿಂದ ಸಿಎಂ ಕುರ್ಚಿಯೇಅಲ್ಲಾಡುವಂತೆ ಮಾಡಿದೆ.
ಪ್ರಕರಣ ಸಂಬಂಧ ಲೋಕಾಯುಕ್ತ ವಿಚಾರಣೆಗೆ ಸಿದ್ದರಾಮಯ್ಯ ಒಳಪಟ್ಟಿದ್ದರಿಂದ ಅನುಕಂಪವೂ ಸೃಷ್ಟಿಯಾಗಿದೆಯಂತೆ. ಇದೇ ಅನುಕಂಪವನ್ನೇ ಚುನಾವಣೆಗೆ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ ಎನ್ನಲಾಗುತ್ತಿದೆ. ಇದೇ ಲೆಕ್ಕಾಚಾರದಲ್ಲಿ ‘ನಾನೇ ಸಿಎಂ’ ಎಂಬುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕೇವಲ ಹೇಳಿಕೆಯನ್ನಷ್ಟೇ ನೀಡಿದ್ದಲ್ಲ. ಹತ್ತಾರು ಸಂದೇಶಗಳನ್ನು ರವಾನೆ ಮಾಡುವ ಕೆಲಸ ಮಾಡ್ತಿದ್ದಾರೆ. ಸಂಡೂರಿನಲ್ಲೇ ನಿಂತು 2 ಕ್ಷೇತ್ರಗಳಿಗೂ ಪ್ರಭಾವ ಬೀರುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಇದರ ಜೊತೆಗೆ ತಪ್ಪು ಮಾಡಿಲ್ಲ ಎಂಬ ದಾಳವನ್ನು ಚುನಾವಣಾ ಪ್ರಚಾರದಲ್ಲಿ ಉರುಳಿಸಿದ್ದಾರೆ. ಈ ಮೂಲಕ ತಮ್ಮ ಸಮುದಾಯದ ಮತಗಳನ್ನ ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕುರುಬ ಸಂಘದ ಜಿಲ್ಲಾಧ್ಯಕ್ಷ ವಿವೇಕ್, ನಾವು ಹಲವಾರು ವರ್ಷಗಳಿಂದ ಕಾಂಗ್ರೆಸ್ ಜತೆಗೆ ಇದ್ದೇವೆ. ಈಗಲೂ ಕಾಂಗ್ರೆಸ್ ಜೊತೆಯಲ್ಲೇ ಇರುತ್ತೇವೆ. ಸಿದ್ದರಾಮಯ್ಯ, ಡಿಕೆ ನಡುವೆ ನಾವು ಭಿನ್ನಾಭಿಪ್ರಾಯ ಮಾಡಲ್ಲ ಎಂದಿದ್ದಾರೆ.
ಏತನ್ಮಧ್ಯೆ, ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಿಎಂ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದಕ್ಕೆ ನಮ್ಮ ಅಭಿಪ್ರಾಯ ಹೇಳುವುದು ಸರಿಯಲ್ಲ ಎಂದಿದ್ದಾರೆ.
ಈ ಮಧ್ಯೆ, ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ. 5 ವರ್ಷ ಅವರೇ ಇರಲಿ. ಸಿದ್ದರಾಮಯ್ಯ ಇದ್ದರೆ ದುರಾಡಳಿತ, ಸಾಬರ ಓಲೈಕೆ ನಡೆಯುತ್ತದೆ. ಜನರಿಗೆ ಮನವರಿಕೆಯಾಗಿ ಸರ್ಕಾರ ಕಿತ್ತೊಗೆಯುತ್ತಾರೆ ಎಂದಿದ್ದಾರೆ. ಇನ್ನೂ ಸಿಎಂ ಆಗಿ ಉಳಿಯುವ ಅನುಮಾನ ಇರೋದರಿಂದಲೇ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ ಎಂದು ಅಶ್ವತ್ಥ್ ನಾರಾಯಣ ಕಾಲೆಳೆದಿದ್ದಾರೆ.