ಐಸಿಸಿ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಬೆಂಗಳೂರು ಮೂಲದ ಸ್ಟಾರ್ಟಪ್ ಒಂದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನ ‘ತಗ್ಡಾ ರಹೋ’ ಹೆಸರಿನ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಧೋನಿ ಹಣ ಹೂಡಿದ್ದಾರೆ. ಆದರೆ, ಸ್ಟಾರ್ಟಪ್ ಮಾಲೀಕರು ಧೋನಿ ಎಷ್ಟು ಪ್ರಮಾಣದ ಹೂಡಿಕೆ ಮಾಡಿದ್ದಾರೆ ಅಥವಾ ಎಷ್ಟು ಷೇರುಗಳನ್ನು ಖರೀದಿಸಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ಕ್ರಿಕೆಟಿಗರ ಫಿಟ್ನೆಸ್ಗೆ ಬೇಕಾಗುವ ಭಾರತೀಯ ಭೌತಿಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಗ್ಡಾ ರಹೋ ಸಂಸ್ಥಾಪಕ ರಿಷಬ್ ಮಲ್ಹೋತ್ರಾ ಹೇಳಿದ್ದಾರೆ. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಗರುಡ ಏರೋಸ್ಪೇಸ್, ಹೋಮ್ಲೇನ್, ರಿಗಿ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಇದೀಗ ಅವರು ಆಧುನಿಕ ತರಬೇತಿಗೆ ಬೇಕಾದ ಸಾಂಪ್ರದಾಯಿಕ ಭಾರತೀಯ ವ್ಯಾಯಾಮ ಸಾಧನಗಳನ್ನು ಒದಗಿಸುವ ಈ ಫಿಟ್ನೆಸ್ ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ್ದಾರೆ.
ಈ ಸ್ಟಾರ್ಟ್ಅಪ್ ತನ್ನ ವೆಬ್ಸೈಟ್ ಮೂಲಕವೂ ಫಿಟ್ನೆಸ್ಗೆ ಬೇಕಾದ ತರಬೇತಿ ಸಾಧನಗಳನ್ನು ಮಾರಾಟ ಮಾಡುತ್ತದೆ. ಸಂಸ್ಥೆ ಬೆಂಗಳೂರಿನಲ್ಲಿ ತಗ್ಡಾ ರಹೋ ಡಗ್ಔಟ್ ತರಬೇತಿ ಕೇಂದ್ರಗಳನ್ನು ಸಹ ನಡೆಸುತ್ತಿದೆ. ಇದು ಆಧುನಿಕ ತಂತ್ರಗಳೊಂದಿಗೆ ಸಾಂಪ್ರದಾಯಿಕ ಸಲಕರಣೆಗಳ ಬಳಕೆಯನ್ನು ಒಳಗೊಂಡಿದೆ.