ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನಿವೃತ್ತಿಯ ಅಂಚಿನಲ್ಲಿದ್ದಾರೆ. 2023ರಲ್ಲಿ ತಮ್ಮ ಸಾರಥ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಾಖಲೆಯ 5ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದುಕೊಟ್ಟ ಎಂಎಸ್ಡಿ ಆಗಲೇ ನಿವೃತ್ತಿ ತೆಗೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ತಮಗೆ ಅಪಾರ ಪ್ರೀತಿಕೊಟ್ಟ ಅಭಿಮಾನಿಗಳ ಸಲುವಾಗಿ ಇನ್ನೊಂದು ಬಾರಿ ಐಪಿಎಲ್ ಆಡುವುದಾಗಿ ಹೇಳಿಕೊಂಡಿದ್ದರು. ಅಂತೆಯೇ ಐಪಿಎಲ್ 2024 ಟೂರ್ನಿಯಲ್ಲಿ ಅಭಿಮಾನಿಗಳಿಗೆ ಧೋನಿ ತಮ್ಮ ಹಳೇ ಖದರ್ ಮೂಲಕ ಮನರಂಜಿಸುತ್ತಿದ್ದಾರೆ.
ತಮ್ಮ ಕ್ರಿಕೆಟ್ ವೃತ್ತಿಬದುಕಿನ ಆರಂಭಿಕ ದಿನಗಳಲ್ಲಿ ಉದ್ದ ಕೂದಲಿನೊಂದಿಗೆ ತಮ್ಮದೇ ಸ್ಟೈಲ್ ಸ್ಟೇಟ್ಮೆಂಟ್ ನೀಡಿದ್ದ ಎಂಎಸ್ ಧೋನಿ, ಈಗ ತಮ್ಮ ವೃತ್ತಿಬದುಕಿನ ಕೊನೇ ಘಟ್ಟದಲ್ಲೂ ಅದೇ ಉದ್ದ ಕೂದಲಿನ ಹೇರ್ಸ್ಟೈಲ್ನೊಂದಿಗೆ ಕಣಕ್ಕಿಳಿದಿದ್ದಾರೆ. ಜೊತೆಗೆ ಬ್ಯಾಟಿಂಗ್ನಲ್ಲಿ ಆರಂಭಿಕ ದಿನಗಳಲ್ಲಿ ಮಿಂಚುತ್ತಿದ್ದ ಮಾದರಿ ದೈತ್ಯ ಹೊಡೆತಗಳ ಮೂಲಕ ಅಬ್ಬರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಕಡೇ ಓವರ್ಗಳಲ್ಲಿ ಬ್ಯಾಟ್ ಮಾಡಿ ಫೋರ್ ಸಿಕ್ಸರ್ಗಳ ಮೂಲಕ ಅಬ್ಬರಿಸಿದ್ದಾರೆ. ಈ ಮಧ್ಯ ಐಪಿಎಲ್ ವೃತ್ತಿಬದುಕಿನಲ್ಲಿ ಸಿಎಸ್ಕೆ ಪರ ದಾಖಲೆಯ 250 ಪಂದ್ಯಗಳನ್ನು ಆಡಿದ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ಒಂದು ಫ್ರಾಂಚೈಸಿ ಪರ 250ಕ್ಕೂ ಹೆಚ್ಚು ಪಂದ್ಯ ಆಡಿದ ಆಟಗಾರ ಎನಿಸಿದ್ದಾರೆ.
ಕ್ರೀಡಾಂಗಣದಲ್ಲಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಆಟವಾಡುತ್ತಿರುವ ಎಂಎಸ್ಡಿ ತಮ್ಮ ನಿವೃತ್ತಿಗೆ ಬೇಕಾದ ಪರ್ಫೆಕ್ಟ್ ವೇದಿಕೆ ನಿರ್ಮಿಸುತ್ತಿದ್ದಾರೆ. ಸಿಎಸ್ಕೆಗೆ ಮತ್ತೊಂದು ಟ್ರೋಫಿ ಗೆದ್ದುಕೊಟ್ಟೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಗುಡ್ ಬೈ ಹೇಳುವುದು ಎಂಎಸ್ಡಿ ಲೆಕ್ಕಾಚಾರವಾಗಿದೆ.