ಮೌತ್ವಾಶ್ ಬಗ್ಗೆ ನೀವು ಖಂಡಿತವಾಗಿಯೂ ಕೇಳಿರಬಹುದು. ನಮ್ಮ ನಿಮ್ಮಂತೆಯೇ ಸಾಕಷ್ಟು ಮಂದಿ ದಿನನಿತ್ಯ ಮೌತ್ವಾಶ್ ಬಳಸುತ್ತಾರೆ. ಮೌತ್ ವಾಶ್ ಒಂದು ಲಿಕ್ವಿಡ್ ಆಗಿದ್ದು ಇದರ ಬಳಕೆಯಿಂದ ಹಲ್ಲು, ಒಸುಡಿನ ಜೊತೆಗೆ ನಿಮ್ಮ ಬಾಯಿ ಶುದ್ಧವಾಗುತ್ತದೆ.
ಕೇಂದ್ರ ಬಜೆಟ್; ಎಷ್ಟು ಗಂಟೆಗೆ ಮಂಡನೆ? ಹೇಗಿದೆ ಸಿದ್ಧತೆ? ಇಲ್ಲಿದೆ ಮಾಹಿತಿ!
ಹಲವು ರೀತಿಯ ಮೌತ್ವಾಷ್ಗಳು ಬಳಕೆಯಲ್ಲಿವೆ. ಆಂಟಿಸೆಪ್ಟಿಕ್, ಫ್ಲೂರೈಡ್ಯುಕ್ತ, ಕಾಸ್ಮೆಟಿಕ್, ಚಿಕಿತ್ಸಕ ಮುಂತಾದವುಗಳಲ್ಲಿ ನಿಮ್ಮ ಅಗತ್ಯ ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆಂಟಿಸೆಪ್ಟಿಕ್ ಮೌತ್ವಾಷ್ಗಳು ದಿನ ಬಳಕೆಗೆ ಬೇಕಾಗುವುದಿಲ್ಲ. ದಿನವೂ ಬಳಸುವುದರಿಂದ ತೊಂದರೆಗಳು ಬರಬಹುದು. ಫ್ಲೂರೈಡ್ ಇರುವಂಥವನ್ನು ದಿನಕ್ಕೊಮ್ಮೆ ಬಳಸಬಹುದು. ಅದರಲ್ಲೂ ನೀವು ಇರುವ ಭೌಗೋಳಿಕ ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೂರೈಡ್ ಅಂಶ ಕಡಿಮೆ ಇದ್ದರೆ, ಖಂಡಿತಕ್ಕೂ ದಿನಕ್ಕೊಮ್ಮೆ ಇದನ್ನು ಬಳಸಬಹುದು.
ಕಾಸ್ಮೆಟಿಕ್ ಮೌತ್ವಾಷ್ಗಳು ಬಾಯಿಯ ದುರ್ಗಂಧ ನಿವಾರಣೆಗೆ ಮಾತ್ರವೇ ಸಹಕಾರಿ. ಚಿಕಿತ್ಸಕ ಮೌತ್ವಾಷ್ಗಳನ್ನು ವೈದ್ಯರೇ ನೀಡಬೇಕಾಗುತ್ತದೆ. ಯಾವುದೋ ಸಮಸ್ಯೆಯನ್ನೇ ಗುರಿಯಾಗಿಸಿ ನೀಡಲಾಗುವ ಇವುಗಳನ್ನು ಸದಾ ಕಾಲ ಉಪಯೋಗಿಸುವಂತಿಲ್ಲ. ಸಾಮಾನ್ಯ ಬಳಕೆಗೂ ದಂತ ವೈದ್ಯರ ಸಲಹೆ ಅಗತ್ಯ. ಈ ಮಾಹಿತಿಯ ಆಧಾರದ ಮೇಲೆ ದಿನವೂ ಮೌತ್ವಾಷ್ ಉಪಯೋಗಿಸಬಹುದೇ ಎಂಬುದನ್ನು ನೀವೇ ನಿರ್ಧರಿಸಬಹುದು.
ಫ್ಲೂರೈಡ್ ಹೊಂದಿರುವ ಮೌತ್ವಾಷ್ಗಳು ಬಾಯಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ದಂತಗಳ ಎನಾಮಲ್ ರಕ್ಷಣೆ ಮಾಡಿ, ಒಡಸುಗಳನ್ನು ಸುರಕ್ಷಿತವಾಗಿ ಇರಿಸಿ, ಹಲ್ಲುಗಳ ಬೇರನ್ನು ಭದ್ರ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಹಲ್ಲುಗಳು ಹುಳುಕಾಗಿ, ಕುಳಿಯಾಗದಂತೆ ರಕ್ಷಣೆ ನೀಡುತ್ತವೆ. ಒಟ್ಟಾರೆಯಾಗಿ ಬಾಯಿಯ ಆರೋಗ್ಯಕ್ಕೆ ಇದೊಂದು ಒಳ್ಳೆಯ ಆಯ್ಕೆ.
ಬ್ಯಾಕ್ಟೀರಿಯ ದೂರ
ಬಾಯಲ್ಲಿ ಬ್ಯಾಕ್ಟೀರಿಯಗಳ ಸಾಂದ್ರತೆ ಹೆಚ್ಚಿದಂತೆ ದುರ್ಗಂಧವೂ ಹೆಚ್ಚುತ್ತದೆ. ಅದರಲ್ಲೂ ಸಾಮಾಜಿಕ ಸಂದರ್ಭಗಳಲ್ಲಿ ಬಚ್ಚಲಿನಂಥ ಬಾಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು, ಜೀರ್ಣಾಂಗಗಳ ಆರೋಗ್ಯ ನಿಭಾಯಿಸುವುದು, ಆಗಾಗ ನೀರು ಕುಡಿಯುವುದು- ಇಂಥವೆಲ್ಲ ಬಾಯಿಯ ದುರ್ಗಂಧ ನಿವಾರಣೆಯಲ್ಲಿ ಮುಖ್ಯವಾದವು. ಜೊತೆಗೆ ಮೌತ್ವಾಷ್ ಬಳಕೆಯಿಂದ ಬ್ಯಾಕ್ಟೀರಿಯಗಳು ಕಡಿಮೆಯಾಗಿ ದುರ್ಗಂಧವೂ ನಿವಾರಣೆಯಾಗುತ್ತದೆ.
ಆರೋಗ್ಯಕರ ಒಸಡು
ಕೆಲವು ಮೌತ್ವಾಷ್ಗಳು ಬ್ಯಾಕ್ಟೀರಿಯ ವಿರೋಧಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥವುಗಳ ನಿಯಮಿತ ಬಳಕೆಯಿಂದ ದಂತ ಕುಳಿಗಳನ್ನು, ಒಸಡಿನ ಸೋಂಕುಗಳನ್ನು ಮಟ್ಟ ಹಾಕಬಹುದು. ಬಾಯಲ್ಲಿ ಬ್ಯಾಕ್ಟೀರಿಯಗಳ ಪ್ಲೇಕ್ಗಳು ನಿರ್ಮಾಣವಾಗಿ ಒಸಡಿನ ಆರೋಗ್ಯಕ್ಕೆ ಸವಾಲೊಡ್ಡುವ ಸಾಧ್ಯತೆ ಇರುತ್ತದೆ. ಇವುಗಳಿಗೂ ಕೆಲವು ಮೌತ್ವಾಷ್ಗಳು ಪರಿಹಾರ ಒದಗಿಸಬಲ್ಲವು.
ಉಪಯೋಗ ಸುಲಭ
ಮನೆಯಲ್ಲಿದ್ದರೂ, ಪ್ರಯಾಣದಲ್ಲಿದ್ದರೂ ಇವುಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದು ಸುಲಭ. ಫ್ಲೋಸಿಂಗ್ನಂಥ ಕ್ರಮಗಳು ಸಮಯ ಬೇಡುತ್ತವೆ. ಮಾತ್ರವಲ್ಲ, ವಿಮಾನದಲ್ಲಿ, ಟ್ರೇನ್ನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಮಾಡಲೂ ಸಾಧ್ಯವಿಲ್ಲ. ಆದರೆ ಮೌತ್ವಾಷ್ ಬಳಕೆಗೆ ಅಂಥ ಯಾವುದೇ ಅಡೆ-ತಡೆಗಳಿಲ್ಲ; ಇದರ ಬಳಕೆ ಅತಿ ಸುಲಭ.
ಅಡ್ಡ ಪರಿಣಾಮಗಳಿವೆ
ಬಹಳಷ್ಟು ಮೌತ್ವಾಷ್ಗಳು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತವೆ. ಇದು ಬಾಯಿ ಒಣಗಿದಂತೆ ಮಾಡಿ, ಕಿರಿಕಿರಿ ಉಂಟುಮಾಡಬಹುದು. ದೀರ್ಘಕಾಲ ಇಂಥ ಮೌತ್ವಾಷ್ ಬಳಸುವುದರಿಂದ, ಈ ಸಮಸ್ಯೆಗಳು ಹೆಚ್ಚುತ್ತವೆ. ಹಾಗಾಗಿ ಸೂಕ್ಷ್ಮ ಒಸಡುಗಳು ಇರುವವರಿಗೆ ಮತ್ತು ಗರ್ಭಿಣಿಯರಿಗೆ ಆಲ್ಕೋಹಾಲ್ ಇಲ್ಲದಂಥ ಮೌತ್ವಾಷ್ ಬಳಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.
ಬಾಯೆಲ್ಲ ಒಣಗಿದಂತಾಗುವುದು, ಉರಿ, ಬಾಯಿಯ ರುಚಿಯೇ ಬದಲಾದ ಅನುಭವ, ಅತಿಯಾಗಿ ಬಳಸಿದರೆ ನಾಲಿಗೆ ಮತ್ತು ಹಲ್ಲುಗಳ ಬಣ್ಣಗೆಡುವುದು, ಸಂವೇದನೆ ಹೆಚ್ಚುವುದು ಇತ್ಯಾದಿ ಹಲವು ಸಮಸ್ಯೆಗಳು ಮೌತ್ವಾಷ್ ಬಳಕೆ ಅತಿಯಾದರೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಈ ಅಂಶಗಳು ಹೊಟ್ಟೆ ಸೇರಿದರೆ, ಜೀರ್ಣಾಂಗಗಳಲ್ಲಿ ಕಿರಿಕಿರಿ, ಹೊಟ್ಟೆ ತೊಳೆಸಿದಂತಾಗುವುದು ಸಾಮಾನ್ಯ. ಹಾಗಾಗಿ ಮಕ್ಕಳು ಇದನ್ನು ಬಳಸುವುದಾದರೆ ಅವರತ್ತ ಲಕ್ಷ್ಯ ನೀಡಿ.