ಚೆನ್ನೈ :- ಅಕ್ರಮ ಹಣ ವರ್ಗಾವಣೆ ಕೇಸ್ ಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ಗೆ ಇಡಿ ಸಮನ್ಸ್ ಜಾರಿ ಮಾಡಿದೆ. ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರ ವಿಚಾರಣೆಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. ತನಿಖೆಯು ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲರ್ಸ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದೆ. ನವೆಂಬರ್ 20 ರಂದು ಆ ಸಂಸ್ಥೆಯ ಮೇಲೆ ದಾಳಿ ನಡೆಸಿ, ರೂ. 23. 70 ಲಕ್ಷ ಹಾಗೂ ಚಿನ್ನಾಭರಣವನ್ನು ಇಡಿ ವಶ ಪಡಿಸಿಕೊಂಡಿತ್ತು ಪ್ರಕಾಶ್ ರಾಜ್ ಈ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಮುಂದಿನ ವಾರ ಚೆನ್ನೈನಲ್ಲಿರುವ ಇಡಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಹಿಂದಿ ಮತ್ತು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಹೆಸರಾಗಿರುವ ಪ್ರಕಾಶ್ ರಾಜ್, ಬಿಜೆಪಿಯ ತೀವ್ರ ಟೀಕಾಕಾರರಾಗಿದ್ದಾರೆ. ತಮಿಳುನಾಡು ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ಎಫ್ಐಆರ್ನಿಂದ ಇಡಿ ಪ್ರಕರಣ ದಾಖಲಿಸಿದೆ. ಪೊಲೀಸ್ ದೂರಿನ ಪ್ರಕಾರ, ಪ್ರಣವ್ ಜ್ಯುವೆಲರ್ಸ್ ಮತ್ತು ಇತರರು ಚಿನ್ನದ ಹೂಡಿಕೆ ಯೋಜನೆಯ ನೆಪದಲ್ಲಿ ಸಾರ್ವಜನಿಕರಿಂದ 100 ಕೋಟಿ ರೂ.ಗಳನ್ನು ಹೆಚ್ಚಿನ ಆದಾಯದ ಭರವಸೆಯೊಂದಿಗೆ ಸಂಗ್ರಹಿಸಿದ್ದಾರೆ ಎಂದು ಫೆಡರಲ್ ಏಜೆನ್ಸಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.