ಪಾದದ ಗಾಯದ ಸಮಸ್ಯೆಯಿಂದ ಬಳಸುತ್ತಿರುವ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆಂದು ವರದಿಯಾಗಿದೆ. ಪ್ರಸ್ತುತ ಭಾರತ ಹಾಗೂ ಆಫ್ರಿಕಾ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ವೈಟ್ ಬಾಲ್ ಸರಣಿ ಮುಗಿದ ಬಳಿಕ ಉಭಯ ತಂಡಗಳು ಡಿಸೆಂಬರ್ 26 ರಿಂದ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಅವರು ವಿಮಾನದ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಮೊಹಮ್ಮದ್ ಶಮಿ ಇವರ ಜೊತೆ ಹೋಗಿಲ್ಲ ಎಂದು ಕ್ರಿಕ್ಬಝ್ ವರದಿ ಮಾಡಿದೆ. ಈ ಮೂವರು ಹಿರಿಯರ ಆಟಗಾರರ ಜೊತೆ ನವದೀಪ್ ಸೈನಿ ಹಾಗೂ ಹರ್ಷಿತ್ ರಾಣಾ ಕೂಡ ವಿಮಾನದಲ್ಲಿ ತೆರಳಿದ್ದಾರೆಂದು ವರದಿಯಾಗಿದೆ.
ಬೌಲಿಂಗ್ ಲ್ಯಾಂಡಿಂಗ್ ಪಾದದಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಮೊಹಮ್ಮದ್ ಶಮಿ ಇತ್ತೀಚೆಗೆ ಹೇಳಿಕೊಂಡಿದ್ದಾರೆಂದು ವರದಿಯಾಗಿದೆ. ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೇ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಆದರೂ ಅವರು ನೋವಿನಲ್ಲಿಯೇ ಬೌಲ್ ಮಾಡಿದ್ದರು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಶಮಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಆದರೆ, ಟೆಸ್ಟ್ ಸರಣಿಗೂ ಮುನ್ನ ಏನಾದರೂ ಶಮಿ ಸಂಪೂರ್ಣ ಫಿಟ್ ಆದರೆ, ಹರಿಣಗಳ ನಾಡಿಗೆ ಪ್ರವಾಸ ಮಾಡಿದರೂ ಅಚ್ಚರಿ ಇಲ್ಲ.
ಅಂದ ಹಾಗೆ ಟೀಮ್ ಮ್ಯಾನೇಜ್ಮೆಂಟ್ ಏಕದಿನ ಸರಣಿ ಮುಗಿಯುವವರೆಗೂ ಕಾದು ನೋಡಲಿದೆ. ಒಂದು ವೇಳೆ ಮೊಹಮ್ಮದ್ ಶಮಿ ಫಿಟ್ ಆಗಿಲ್ಲವಾದರೆ ಬದಲಿ ವೇಗಿಯನ್ನು ಬಿಸಿಸಿಐ ಸೂಚಿಸಬಹುದು. ಆದರೆ, ಸದ್ಯ ಬಿಸಿಸಿಐ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈಗಾಗಲೇ ಭಾರತ ತಂಡದ ಸೀಮಿತ ಓವರ್ಗಳ ಸರಣಿ ನಡೆಯುತ್ತಿದೆ. ಈ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಬೌಲರ್ ಒಬ್ಬರನ್ನು ಬಿಸಿಸಿಐ ಮೊಹಮ್ಮದ್ ಶಮಿ ಸ್ಥಾನಕ್ಕೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಬಹುದು.