ದೋಹಾ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹಮಾನ್ ಅಲ್ ಥಾನಿ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಿದ್ದಾರೆ.
ಮೋದಿ ಅವರು ಕತಾರ್ ರಾಜಧಾನಿ ದೋಹಾಗೆ ಬುಧವಾರ ರಾತ್ರಿ ಬಂದರು. ಇದು ಕತಾರ್ಗೆ ಅವರ ಎರಡನೇ ಭೇಟಿಯಾಗಿದ್ದು, 2016ರ ಜೂನ್ನಲ್ಲಿ ಮೊದಲ ಮೋದಿ ಕತಾರ್ ಗೆ ಭೇಟಿನೀಡಿದ್ದರು.
ಮೊಹಮ್ಮದ್ ಬಿನ್ ಅಬ್ದುಲ್ರಹಮಾನ್ ಅಲ್ ಥಾನಿ ಅವರನ್ನು ಭೇಟಿಯಾದ ಕುರಿತು ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, ‘ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹಮಾನ್ ಅಲ್ ಥಾನಿ ಅವರೊಂದಿಗೆ ಉತ್ತಮ ಸಭೆ ನಡೆಸಿದೆ. ಭಾರತ-ಕತಾರ್ ಸ್ನೇಹ ಸಂಬಂಧವನ್ನು ಉತ್ತೇಜಿಸುವುದರ ಸುತ್ತ ನಮ್ಮ ಮಾತುಕತೆ ನಡೆಯಿತು’ ಎಂದಿದ್ದಾರೆ.
ಇದಕ್ಕೂ ಮೊದಲು ವಿದೇಶಾಂಗ ಸಚಿವಾಲಯವು, ಮೋದಿ ಹಾಗೂ ಕತಾರ್ ಪ್ರಧಾನಿ ನಡುವಣ ಮಾತುಕತೆ ಫಲಪ್ರದವಾಗಿತ್ತು ಎಂದು ತಿಳಿಸಿತ್ತು.ಕತಾರ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ ಅವರನ್ನು ಅಲ್ಲಿನ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಸೊಲ್ತಾನ್ ಬಿನ್ ಸಾದ್ ಅಲ್-ಮುರೈಖಿ ಸ್ವಾಗತಿಸಿದರು.
ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಇಂದು (ಗುರುವಾರ) ಭೇಟಿ ಮಾಡಲಿರುವ ಮೋದಿ, ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿ, ಪ್ರಾದೇಶಿಕ ಅಭಿವೃದ್ಧಿ, ಜಾಗತಿಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ.