77ನೇ ಸಾಲಿನ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾರತಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ನಿರ್ದೇಶಕಿ ಪಾಯಲ್ ಕಪಾಡಿಯಾ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಸಿನಿಮಾಗೆ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ದೊರೆತಿದ್ದು, ಈ ಪ್ರಶಸ್ತಿ ಪಡೆದ ಭಾರತದ ಮೊದಲ ಡೈರೆಕ್ಟರ್ ಎಂಬ ಖ್ಯಾತಿಗೆ ಪಾಯಲ್ ಕಪಾಡಿಯಾ ಪಾತ್ರರಾಗಿದ್ದಾರೆ. ಸದ್ಯ ಪಾಯಲ್ ಅವರಗೆ ಸೋಶಿಯಲ್ ಮೀಡಿಯಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.
ಪಾಯಲ್ ಕಪಾಡಿಯಾ ಅವರಿಂದಾಗಿ ಯುವ ಫಿಲ್ಮ್ ಮೇಕರ್ಗಳಿಗೆ ಸ್ಫೂರ್ತಿ ಸಿಕ್ಕಿದೆ ಎಂದು ನರೇಂದ್ರ ಮೋದಿ ಹೊಗಳಿದ್ದಾರೆ.
‘ಪಾಯಲ್ ಕಪಾಡಿಯಾ ಅವರಿಂದ ಭಾರತಕ್ಕೆ ಹೆಮ್ಮೆ ಆಗಿದೆ. 77ನೇ ಕಾನ್ ಚಿತ್ರೋತ್ಸವದಲ್ಲಿ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಸಿನಿಮಾಗೆ ಅವರು ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೇ ವಿದ್ಯಾರ್ಥಿಯಾದ ಅವರು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯಿಂದ ಶೈನ್ ಆಗುತ್ತಿದ್ದಾರೆ. ಭಾರತದ ಶ್ರೀಮಂತ ಸೃಜನಶೀಲತೆಗೆ ಅವರು ಸಾಕ್ಷಿ. ಈ ಪ್ರತಿಷ್ಠಿತ ಪ್ರಶಸ್ತಿಯು ಅವರಿಗೆ ಸಂದ ಗೌರವ ಮಾತವಲ್ಲದೇ, ಭಾರತದಲ್ಲಿನ ಹೊಸ ತಲೆಮಾರಿನ ಫಿಲ್ಮ್ ಮೇಕರ್ಗಳಿಗೆ ಸ್ಫೂರ್ತಿಯಾಗಿದೆ’ ಎಂದು ನರೇಂದ್ರ ಮೋದಿ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ 30 ವರ್ಷಗಳಲ್ಲಿ ಕಾನ್ ಚಿತ್ರೋತ್ಸವದ ಮುಖ್ಯ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಸಿನಿಮಾ ಇದಾಗಿದೆ. ಬೇರೆ ಬೇರೆ ದೇಶಗಳ ಸಿನಿಮಾಗಳ ಜೊತೆ ಸ್ಪರ್ಧಿಸಿ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಸಿನಿಮಾ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಿನಿಮಾದ ಕಲಾವಿದರ ಜೊತೆ ನಿರ್ದೇಶಕಿ ಪಾಯಲ್ ಕಪಾಡಿಯಾ ಅವರು ಕಾನ್ ಚಿತ್ರೋತ್ಸವಕ್ಕೆ ತೆರಳಿದ್ದಾರೆ.
ನಿರ್ದೇಶಕಿ ಪಾಯಲ್ ಕಪಾಡಿಯಾ ಅವರ ಈ ಸಾಧನೆಗಾಗಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಇಂಡೋ-ಫ್ರೆಂಚ್ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದ್ದು, ಮೇ 23ರಂದು ಈ ಸಿನಿಮಾದ ಪ್ರೀಮಿಯರ್ ಆಯಿತು. ಅಂದು ಸಿನಿಮಾ ಮುಗಿದ ಬಳಿಕ ಪ್ರೇಕ್ಷಕರು 8 ನಿಮಿಷಗಳ ಕಾಲ ಎದ್ದು ನಿಂತು ಚಿತ್ರತಂಡಕ್ಕೆ ಗೌರವ ಸಲ್ಲಿಸಿದ್ದರು.