ಲೋಕಸಭೆ ಚುನಾವಣೆಯ ನಂತರ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಮೊಬೈಲ್ ಸೇವಾ ಸಂಸ್ಥೆಗಳು ಸುಂಕ ಹೆಚ್ಚಿಸಲು ಸಿದ್ಧತೆ ನಡೆಸಿದ್ದು, ಚುನಾವಣೆ ಮುಗಿದ ಬೆನ್ನಲ್ಲೇ ಮೊಬೈಲ್ ರೀಚಾರ್ಜ್ ದುಬಾರಿಯಾಗಲಿದೆ ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆಯ ನಂತರ ಟೆಲಿಕಾಂ ಉದ್ಯಮದಲ್ಲಿ ಅಂದಾಜು 15-17% ನಷ್ಟು ಸುಂಕ ಹೆಚ್ಚಳವಾಗಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ವರದಿ ಹೇಳಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ನಡೆಯಲಿವೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಆ್ಯಂಟಿಕ್ ಸ್ಟಾಕ್ ಬ್ರೋಕಿಂಗ್ನ ಈ ವರದಿಯ ಪ್ರಕಾರ ಟೆಲಿಕಾಂ ವಲಯದಲ್ಲಿ ಸುಂಕ ಹೆಚ್ಚಳವು ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಚುನಾವಣೆಯ ನಂತರ ದರ ಮತ್ತಷ್ಟು ಹೆಚ್ಚಾಗಲಿದೆ.
ಲೋಕಸಭಾ ಚುನಾವಣೆಯ ನಂತರ ಟಿಲಿಕಾಂ ಉದ್ಯಮವು ಶೇ.15-17ರಷ್ಟು ಶುಲ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಡಿಸೆಂಬರ್ 2021ರಲ್ಲಿ ಕೊನೆಯ ಬಾರಿಗೆ ಸುಮಾರು 20% ನಷ್ಟು ಶುಲ್ಕವನ್ನು ಹೆಚ್ಚಿಸಲಾಗಿತ್ತು. ಅಂದರೆ ಸದ್ಯ ಸುಮಾರು 3 ವರ್ಷಗಳ ನಂತರ ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಉದಾಹರಣೆಗೆ ಈಗ 17% ರಷ್ಟು ಶುಲ್ಕ ಹೆಚ್ಚಳವಾಗಿ 300 ರೂ ರೀಚಾರ್ಜ್ ಮಾಡಿದರೆ, ಶುಲ್ಕ ಹೆಚ್ಚಳದ ನಂತರ ನೀವು 351 ರೂಪಾಯಿ ಪಾವತಿಸಬೇಕಾಗುತ್ತದೆ.