ಹುಬ್ಬಳ್ಳಿ; ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4, 2023 ರಿಂದ ಡಿಸೆಂಬರ್ 15ರ ವರೆಗೆ 10 ದಿನಗಳ ಕಾಲ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿನ ಸಮಸ್ಯೆ, ಅಭಿವೃದ್ಧಿ ಹಾಗೂ ಇನ್ನಿತರ ಪ್ರಶ್ನೆ ಕೇಳುವ ಶಾಸಕರಿಗೆ ಸಚಿವರಿಗೆ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಎಸ್. ಹೊರಟ್ಟಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಸಮಸ್ಯೆಗಳು ಇವೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಚಳಿಗಾಲ ಅಧಿವೇಶನ ನಡೆಯುವುದರಿಂದ ಈ ಭಾಗದಲ್ಲಿರುವ ಅಭಿವೃದ್ಧಿ ಕಾಮಗಾರಿಗಳು ಬಗ್ಗೆ ಹೆಚ್ಚು ಹೆಚ್ಚು ಚರ್ಚೆ ಆಗಬೇಕು ಆದ್ದರಿಂದ ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಹಾಗೂ ಸಚಿವರ ,ಮುಖ್ಯಮಂತ್ರಿಗಳ ಗಮನಕ್ಕೆ ಸಹ ತರಲಾಗಿದೆ.ಪ್ರಶ್ನೋತ್ತರ ವೇಳೆ ನಂತರ ವಿಶೇಷ ಸಮಯ ನಿಗದಿ ಮಾಡಲಾಗುವುದು ಎಂದರು. ಅನಗತ್ಯವಾಗಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ,
ಮನವಿ ಮಾಡಿ ಕಾಲಹರಣ ಮಾಡದೇ ಅಧಿವೇಶನ ಉಪಯೋಗ ಆಗುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಅಧಿವೇಶನದ ಅತ್ಯಮೂಲ್ಯವಾದ ಸಮಯ ಹಾಳಾಗಬಾರದು. ಈ ಹಿನ್ನೆಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನ ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ನಡೆಸಲು ಸಲಹೆ ನೀಡಿದೇನೆ ಎಂದರು.
ಕೃಷಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವಾರು ಸಂಘಟನೆಗಳು ಧರಣಿ, ಸತ್ಯಾಗ್ರಹ ನಡೆಸುವುದು ಸಾಮಾನ್ಯವಾಗಿದ್ದು, ಈ ಹಿನ್ನಲೆಯಲ್ಲಿ ಅಧಿವೇಶನ ಆರಂಭಗೊಳ್ಳುವ ಮುಂಚೆಯೇ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರ ಸಭೆ ಕರೆದು ಅವರ ಬೇಡಿಕೆ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಿ ಅವುಗಳ ಪರಿಹಾರಕ್ಕೆ ಪ್ರಯತ್ನಿಸುವ ಮೂಲಕ ಸಂಘಟನೆಗಳು ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಹೊರಗಡೆ ಧರಣಿ ಸತ್ಯಾಗ್ರಹ ನಡೆಸದಂತೆ ಸಂಘಟನೆಗಳ ಮುಖಂಡರಲ್ಲಿ ಮನವಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಂಬಂಧಪಟ್ಟ ಸಚಿವರಿಗೆ ಸೂಚಿಸಬೇಕು ಹಾಗೂ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಮಹತ್ವದ ಬಿಲ್ ಈ ಸಲ ಇಲ್ಲ ಬರಗಾಲ ಸೇರಿದಂತೆ ಇತರ ಸಮಸ್ಯೆ ಹಾಗೂ ಏನಾದರೂ ರಾಜ್ಯಕ್ಕೆ ಸಂಬಂಧಿಸಿದ ಬಿಲ್ ಬರಬಹುದು ಆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಾಗುವುದು ಎಂದ ಅವರು ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗ ವಹಿಸಲು ಸಹ ತಿಳಿಸಲಾಗಿದೆ ಎಂದರು. ಇನ್ನು ಅನುದಾನ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೇಮಕಾತಿ ಅಧಿವೇಶನದಲ್ಲಿ ಒಪ್ಪಿಗೆ ಸಿಗಬಹುದು ಈಗಾಗಲೇ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು.