ಬೆಂಗಳೂರು: ತಮ್ಮ ನೇರ ನುಡಿಗಳಿಂದಲೇ ಚಾಲ್ತಿಯಲ್ಲಿರುವ ಮಂಡ್ಯದ ಶಾಸಕ ರವಿಕುಮಾರ್ ಗಣಿಗ ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ ಅಂತಾ ಆರೋಪ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ರಶ್ಮಿಕಾಗೆ ಭದ್ರತೆ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೂ ಪತ್ರ ಬರೆದಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹಿಸಿದೆ.
ರಶ್ಮಿಕಾ ಮಂದಣ್ಣಗೆ ಜೀವ ಬೆದರಿಕೆ ಪತ್ರದ ವಿಚಾರವಾಗಿ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿರುವ ರವಿಕುಮಾರ್ ಗಣಿಗ, ಯಾರಾದರೂ ಜವಾಬ್ದಾರಿಯುತ ವ್ಯಕ್ತಿ ಮಾತಾಡಿದ್ದರೆ ಬೆಲೆ ಕೊಡಬಹುದು. ಆದರೆ ನಾಚಪ್ಪ ರಾಜ್ಯ ಒಡೆಯುವ ಹೇಳಿಕೆ ಕೊಟ್ಟ ವ್ಯಕ್ತಿ. ಅವರ ಪತ್ರಕ್ಕೆ ಅಷ್ಟು ಬೆಲೆ ಕೊಡುವುದು ಬೇಡ. ನಾನು ನೀಡಿದ ಹೇಳಿಕೆಗೆ ಇವತ್ತು ಬದ್ಧನಿದ್ದೇನೆ. ರಶ್ಮಿಕಾ ಮಂದಣ್ಣ ಚಲನಚಿತ್ರೋತ್ಸವಕ್ಕೆ ಆಹ್ವಾನ ನೀಡಿದ್ದೇವು. ಅವರು ಬಂದಿಲ್ಲ ಅನ್ನೋ ಕಾರಣಕ್ಕೆ ನಾವು ಅಸಮಾಧಾನ ವ್ಯಕ್ತಪಡಿಸಿದ್ದೇವೆ. ಕನ್ನಡ ನೆಲ ಜಲ ನಾಡು ವಿಚಾರಕ್ಕೆ ಎಲ್ಲರೂ ಒಂದಾಗಿರಬೇಕು ಅನ್ನೋದು ನಮ್ಮ ಭಾವನೆ. ಪ್ರಚಾರಕ್ಕೆ ಅಂತ ಪತ್ರ ಬರೆದವರಿಗೆ ಬೆಲೆ ಕೊಡುವುದು ಬೇಡ ಎಂದು ನಾಚಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.