ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ, ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಇಂದು ಬೆಂಗಳೂರಿನ ವಿಶೇಷ ನ್ಯಾಯಾಲಯವು, ಮುನಿರತ್ನ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದು, ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಮೂರ್ತಿ ಸಂತೋಷ್ ಗಜಾನನ ಭಟ್ ನಾಳೆಗೆ(ಸೆಪ್ಟೆಂಬರ್ 19) ಕಾಯ್ದಿರಿಸಿದ್ದಾರೆ.
ಪೊಲೀಸ್ ಕಸ್ಟಡಿ ಅವಧಿ ಮಂಗಳವಾರಕ್ಕೆ ಮುಗಿದ ಕಾರಣ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಮುಂದೆ ಶಾಸಕ ಮುನಿರತ್ನರನ್ನು ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮುನಿರತ್ನ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ಕಾಲಾವಕಾಶ ಕೋರಿದರು. ಆದರೆ ಇದಕ್ಕೆ ಮುನಿರತ್ನ ಪರ ವಕೀಲರು ಆಕ್ಷೇಪಿಸಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದು, 2015 ರಿಂದ 2020 ರವರೆಗೆ ದೂರುದಾರ ಪಾಲಿಕೆ ಸದಸ್ಯರಾಗಿದ್ದರು. ನಂತರ ಭಿನ್ನಾಭಿಪ್ರಾಯ ಬಂದಿತ್ತೆಂದು ದೂರಿನಲ್ಲಿ ಹೇಳಲಾಗಿದೆ. 2015 ರಿಂದ ಯಾವಾಗ ನಿಂದಿಸಿದ್ದರೆಂದು ಹೇಳಿಲ್ಲ 3 (1) r,s ಸೆಕ್ಷನ್ ಅನ್ವಯಿಸುವುದಿಲ್ಲವೆಂದು ಎಸ್ ಪಿಪಿ ಒಪ್ಪಿಕೊಂಡಿದ್ದಾರೆ. 3 (1) u ಅಡಿಯೂ ದೂರಿನಲ್ಲಿನ ಆರೋಪ ಅನ್ವಯವಾಗುವುದಿಲ್ಲ. 41 ಎ ಅಡಿ ನೋಟಿಸ್ ನೀಡಬೇಕಿತ್ತು. ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದರು. ಎರಡೂ ಕಡೆಯಿಂದ ವಾದ ಪ್ರತಿವಾದ ಆಲಿಸಿದ ಜಡ್ಜ್ ಸಂತೋಷ್ ಗಜಾನನ ಭಟ್, ನಾಳೆಗೆ (ಸೆ.19) ಆದೇಶ ಕಾಯ್ದಿರಿಸಿದ್ದಾರೆ.