ಬೆಂಗಳೂರು,ಫೆ.13-ರಾಜಧಾನಿ ಬೆಂಗಳೂರಿಗೆ ದಕ್ಷ ಮತ್ತು ಪ್ರಾಮಾಣಿಕರಾಗಿರುವ ಸಚಿವರೊಬ್ಬರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕೆಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ಪುಟಗಳ ಪತ್ರ ಬರೆದಿರುವ ಮುನಿರತ್ನ ಅವರು,
ಬೆಂಗಳೂರಿಗೆ ದಕ್ಷ ಮತ್ತು ಪ್ರಾಮಾಣಿಕರಾಗಿರುವವರು ಉಸ್ತುವಾರಿಗಳಾಗಿ ನೇಮಕ ಮಾಡಬೇಕಾದ ಅಗತ್ಯವಿದೆ. ಒಂದು ವೇಳೆ ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ಬಗ್ಗೆ ನಿಜವಾದ ಕಳಕಳಿ ಇದ್ದರೆ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ ಅವರುಗಳನ್ನು ನೇಮಕ ಮಾಡುವಂತೆ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.
ಒಂದು ವೇಳೆ ಇವರ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡಬೇಕೆಂಬ ಇಚ್ಛೆ ಇದ್ದರೆ ಸಚಿವ ದಿನೇಶ್ ಗುಂಡೂರಾವ್ ಇಲ್ಲವೇ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರನ್ನಾದರೂ ನೇಮಕ ಮಾಡುವಂತೆಯೂ ಮನವಿ ಮಾಡಿದ್ದಾರೆ.
16ನೇ ಆಯವ್ಯಯದಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಆಂಧ್ರಪ್ರದೇಶದ ಮುಖ್ಯಂತ್ರಿಗಳ ಸಹಚರರು ಹಾಗೂ ಕೆಲವು ಬಲಿಷ್ಟ ಗುತ್ತಿಗೆದಾರರು ನಮ್ಮ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡಲು ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ದಿಗೆ ನೀಡಿರುವ ಅನುದಾನವನ್ನು ಖರೀದಿ ಮಾಡಲು ಹೊರ ರಾಜ್ಯದ ಗುತ್ತಿಗೆದಾರರು ಈಗಾಗಲೇ ಶೇ.12% ರಷ್ಟು ಮುಂಗಡ ಹಣ ನೀಡಿದ್ದಾರೆ. ಕಾರ್ಯಾದೇಶ ಕೊಟ್ಟನಂತರ ಶೇ.8% ಮತ್ತು ಅನುದಾನ ಬಿಡುಗಡೆ ಮಾಡುವುದಕ್ಕೆ ಶೇ.15% ಒಟ್ಟಾರೆ ಸುಮಾರು 35% ಗಳಿಗೆ ಈಗಾಗಲೇ ಪಂಚ ನಕ್ಷತ್ರ ಹೋಟೆಲ್ಗಳಲ್ಲಿ ವ್ಯವಹಾರಗಳನ್ನು ಕುದುರಿಸಿ ಮುಂಗಡ ಹಣವನ್ನು ನೀಡಿದ್ದಾರೆ ಎಂದು ಮುನಿರತ್ನ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿಯವರು ಅನುದಾನ ನೀಡುವು ವೇಳೆ ತಮ್ಮ ನೇತೃತ್ವದಲ್ಲೇ ಬೆಂಗಳೂರು ನಗರದ ಎಲ್ಲಾ ಶಾಸಕರನ್ನು ಕರೆದು ಸಭೆ ಮಾಡಿ ಸದರಿ ಅನುದಾನವನ್ನು ತಾವೇ ನೇರವಾಗಿ ನಗರದ ಕ್ಷೇತ್ರಗಳಿಗೆ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ. 2013 ರಿಂದ 2018ರವರೆಗೆ ತಾವುಗಳು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಸುಮಾರು 10ರಿಂದ 20 ವರ್ಷ ಬೆಂಗಳೂರು ನಗರ ಮುಂದಕ್ಕೆ ಹೋಗಿ ಹೈದರಾಬಾದ್ನ್ನು ಹಿಂದಿಕ್ಕಿದ್ದೆವು. ಆದರೆ ಪ್ರಸ್ತುತ ಕೇವಲ 2 ವರ್ಷಗಳಲ್ಲಿ ಬೆಂಗಳೂರು ನಗರ 20 ವರ್ಷಕ್ಕೆ ಹಿಂದೆ ಹೋಗಿ ಹೈದ್ರಾಬಾದ್ ನಮಗಿಂತ ಮುಂದುವರೆದಿದೆ ಎಂದು ಬೇಸರ ಹೊರಹಾಕಿದ್ದಾರೆ.
ಬೆಂಗಳೂರು ಬಗ್ಗೆ ಕಾಳಜಿ ಇರುವ ಕೃಷ್ಣಭೈರೇಗೌಡ, ಎಂ.ಕೃಷ್ಣಪ್ಪ (ವಿಜಯನಗರ) ಅಥವಾ ದಿನೇಶ್ ಗುಂಡುರಾವ್ ರವರಿಗೆ ಉಸ್ತವಾರಿ ನೀಡಿದ್ದಲ್ಲಿ ಈ 2 ವರ್ಷದ ಕಳಂಕವನ್ನು ನಾವು ತೊಳೆಯಬಹುದು ಎಂದು ಸಲಹೆ ಮಾಡಿದ್ದಾರೆ.
ಇಂದು ಎಲ್ಲೆಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ನಗರದ ಅಪಾರ್ಟ್ ಮೆಂಟ್ಸ್ ಕಟ್ಟಡ ನಿರ್ಮಾಣದ ನಕ್ಷೆ ಮಂಜೂರಾತಿ ಮುಂಚಿತವಾಗಿ ಒಂದು ಚದರ ಅಡಿಗೆ 150 ರೂ. ಕೊಡುವಂತೆ ಭ್ರಷ್ಟಾಚಾರ, ಎಲ್ಒಸಿಗಳಲ್ಲಿ ಭ್ರಷ್ಟಾಚಾರ, ನಾಗಮೋಹನ್ದಾಸ್ ಕಮಿಟಿಯ ಹೆಸರಿನಲ್ಲಿ ಗುತ್ತಿಗೆದಾರರ ಕಾಮಗಾರಿಗಳ ಬಿಲ್ಗಳಲ್ಲಿ ಶೇ.10ರಷ್ಟು ಕಟಾವು ಮಾಡಿ ನಂತರ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಾರೆ.
ಮಹಾನಗರ ಪಾಲಿಕೆಯ ಮುಖ್ಯ ಅಭಿಯಂತರರು ಗುತ್ತಿಗೆದಾರರ ಜೊತೆಯಲ್ಲಿ ದಲ್ಲಾಳಿಗಳಾಗಿ ಬದುಕುತ್ತಿದ್ದಾರೆ. ಇಂದು ಬೆಂಗಳೂರು ನಗರವನ್ನು ಸ್ವಿಸ್ ಬ್ಯಾಂಕ್ ಶೇಖರಣೆ ಮಾಡುವಷ್ಟು ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಏಜೆಂಟ್ಗಳನ್ನೂ ಸಹ ನೇಮಕ ಮಾಡಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಬಳಿ ಇರುವ ಗುಪ್ತಚರ ವಿಭಾಗ ವಿಫಲವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.
ಇಂದು ಹಲವಾರು ಐಟಿಬಿಟಿ ಕಂಪನಿಗಳು ಹೈದರಾಬಾದ್ಗೆ ವಲಸೆ ಹೋಗುತ್ತಿದ್ದಾರೆ. ಐಟಿಬಿಟಿ ಸಚಿವರಾದಂತಹ ಪ್ರಿಯಾಂಕ ಖರ್ಗೆ ರವರು ಉತ್ತಮವಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿಯಾಗಿದ್ದರೂ ಸಹ ಅವರ ಖಾತೆಯಲ್ಲೂ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಆಪಾದಿಸಿದ್ದಾರೆ. ನಾನು ಈ ಪತ್ರ ಬರೆದಿರುವುದಕ್ಕೆ ನನ್ನ ಮೇಲೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ದಲಿತ ದೌರ್ಜನ್ಯ, ಅತ್ಯಾಚಾರ, ಫೆÇೀಸ್ಕೋ ಇನ್ನೂ ಮುಂತಾದ ಸುಳ್ಳು ಆರೋಪಗಳು ದಾಖಲಾಗಬಹುದೆಂದು ನನಗೂ ಅರಿವಿದೆ. ಇಂದು ಎಸ್.ಐ.ಟಿ ಅಧಿಕಾರಿಗಳು ಕಣ್ಣು, ಕಿವಿ. ಬಾಯಿ ಇಲ್ಲದ ಹಾಗೆ ಅವರ ವೃತ್ತಿಗಳನ್ನು ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂಬ ವಿಷಯಗಳನ್ನು ತಮಗೆ ಈ ಪತ್ರದ ಮೂಲಕ ತಿಳಿಬಯಸುತ್ತೇನೆ ಎಂದು ಮುನಿರತ್ನ ಪತ್ರದಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.