ಆಸ್ಟ್ರೇಲಿಯಾದ ಬ್ಯಾಟರ್ ಮಿಚೆಲ್ ಮಾರ್ಷ್ ಕಾಲಿಟ್ಟು ವಿಶ್ರಾಂತಿ ಪಡೆಯುವ ಮೂಲಕ ಟ್ರೋಫಿಗೆ ಅಗೌರವ ತೋರಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ತುಂಬಾ ನೋವಾಯಿತು ಎಂದಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿರುವ ಶಮಿ, ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮಿಚೆಲ್ ಮಾರ್ಷ್ ನಡೆಯನ್ನು ಕುಟುವಾಗಿ ಟೀಕಿಸಿದ್ದಾರೆ. ನನಗೆ ತುಂಬಾ ಬೇಸರವಾಯಿತು. ವಿಶ್ವದ ಎಲ್ಲ ತಂಡಗಳು ಹೋರಾಡುವ ಮತ್ತು ತಲೆಯ ಮೇಲೆ ಹೊತ್ತು ಸಂಭ್ರಮಿಸಲು ಬಯಸುವ ಟ್ರೋಫಿಯ ಮೇಲೆ ಕಾಲು ಇಟ್ಟಿದ್ದು, ನನಗೆ ಸಂತೋಷ ನೀಡಲಿಲ್ಲ ಎಂದು ಶಮಿ ಹೇಳಿದರು.
ಇದೇ ಸಂದರ್ಭದಲ್ಲಿ ಪಿಚ್ ಬಗ್ಗೆ ಮಾತನಾಡಿದ ಶಮಿ, ಸಾಮಾನ್ಯವಾಗಿ ಬೌಲರ್ಗಳು ಮೈದಾನಕ್ಕೆ ಬಂದ ಬಳಿಕ ಪಿಚ್ ಅನ್ನು ಪರಿಶೀಲಿಸುತ್ತಾರೆ. ನಾನು ಎಂದಿಗೂ ವಿಕೆಟ್ ಬಳಿ ಹೋಗುವುದಿಲ್ಲ ಏಕೆಂದರೆ, ನೀವು ವಿಕೆಟ್ ಮೇಲೆ ಬೌಲ್ ಮಾಡಿದಾಗ ಮಾತ್ರ ಅದು ಬಗ್ಗೆ ನಿಮಗೆ ತಿಳಿಯುತ್ತದೆ. ಹೀಗಿರುವಾಗ ಏಕೆ ಒತ್ತಡವನ್ನು ತೆಗೆದುಕೊಳ್ಳಬೇಕು? ಹೀಗಾಗಿ ಸರಳವಾಗಿ ಇಟ್ಟುಕೊಳ್ಳುವುದು ಉತ್ತಮ ಮತ್ತು ನಿಮ್ಮನ್ನು ನೀವು ಆರಾಮವಾಗಿ ಇರಿಸಿಕೊಳ್ಳುವುದು ಉತ್ತಮ. ಆಗ ಮಾತ್ರ ನೀವು ಉತ್ತಮ ಪ್ರದರ್ಶನವನ್ನು ನೀಡುತ್ತೀರಿ ಎಂದು ಪುಮಾ ಇಂಡಿಯಾ ಜೊತೆಗಿನ ಚಾಟ್ನಲ್ಲಿ ಶಮಿ ತಿಳಿಸಿದರು.
ವಿಶ್ವಕಪ್ ಅಭಿಯಾನದಲ್ಲಿ ಭಾರತದ ಪ್ಲೇಯಿಂಗ್ XI ನಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡದಿದ್ದರ ಬಗ್ಗೆಯೂ ಶಮಿ ಮಾತನಾಡಿದರು. ವಾಸ್ತವವಾಗಿ ಶಮಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ತಂಡಕ್ಕೆ ಆಯ್ಕೆಯಾದರು. ತಂಡಕ್ಕೆ ಆಯ್ಕೆಯಾಗಿ ನಾಲ್ಕು ಪಂದ್ಯಗಳಲ್ಲಿ ಸುಮ್ಮನೇ ಕುಳಿತುಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ಮಾನಸಿಕವಾಗಿ ಬಲವಾಗಿರಬೇಕು. ಕೆಲವೊಮ್ಮೆ ನೀವು ಒತ್ತಡದಲ್ಲಿರುತ್ತೀರಿ ಆದರೆ, ತಂಡವು ಉತ್ತಮ ಪ್ರದರ್ಶನ ಮತ್ತು ಉತ್ತಮ ದಿಕ್ಕಿನಲ್ಲಿ ಹೋಗುವುದನ್ನು ನೋಡಿದಾಗ ಅದು ನಿಮಗೆ ತೃಪ್ತಿ ನೀಡುತ್ತದೆ ಎಂದರು.