ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಅವರನ್ನು ಆಸ್ಟ್ರೇಲಿಯಾ ಆಲ್ರೌಂಡರ್ ಮಿಚೆಲ್ ಮಾರ್ಷ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ರಿಷಭ್ ಪಂತ್ ಒಂದು ರೀತಿ ಆಸ್ಟ್ರೇಲಿಯನ್ ರೀತಿ ಕಾಣುತ್ತಾರೆ ಎಂದು ಆಸೀಸ್ ಆಟಗಾರ ಬಣ್ಣಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಿಮಿತ್ತ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಮಿಚೆಲ್ ಮಾರ್ಷ್, “ಅವರು ಸ್ಪೋಟಕ ಬ್ಯಾಟ್ಸ್ಮನ್. ಅವರು ಆಸ್ಟ್ರೇಲಿಯನ್ ಆಟಗಾರ. ಕಳೆದ ಹಲವು ವರ್ಷಗಳಿಂದ ಅವರು ತುಂಬಾ ಅಪಾಯಕಾರಿಯಾಗಿ ಬೆಳೆದಿದ್ದಾರೆ ಹಾಗೂ ಅವರು ಗೆಲ್ಲುವುದನ್ನು ಇಷ್ಟಪಡುತ್ತಾರೆ. ಯಾವಾಗಲೂ ನಗುವ ಹಾಗೂ ಮುಖದಲ್ಲಿ ಮಂದಹಾಸವನ್ನು ಇಟ್ಟುಕೊಳ್ಳುವ ವ್ಯಕ್ತಿಗಳ ಪೈಕಿ ರಿಷಭ್ ಪಂತ್ ಕೂಡ ಒಬ್ಬರು. ಅವರು ದೊಡ್ಡ ಸ್ಮೈಲ್ ಅನ್ನು ಹೊಂದಿದ್ದಾರೆ,” ಎಂದು ಮಿಚೆಲ್ ಮಾರ್ಷ್ ಶ್ಲಾಘಿಸಿದ್ದಾರೆ.
“ರಿಷಭ್ ಪಂತ್ ನಾನು ನಂಬಿರುವ ಆಸ್ಟ್ರೇಲಿಯನ್ ಕ್ರಿಕೆಟಿಗ. ಆಸ್ಟ್ರೇಲಿಯಾ ಕ್ರಿಕೆಟಿಗರೆಲ್ಲರೂ ರಿಷಭ್ ಪಂತ್ ರೀತಿ ಇದ್ದಾರೆ. ಅವರ ಆಕ್ರಮಣಕಾರಿ ಸ್ವಭಾವ ಮತ್ತು ಕೆಲಸದ ನೀತಿಯನ್ನು ಹೊಂದಿರುವ ಅವರೊಂದಿಗೆ ಆಟವಾಡಲು ತುಂಬಾ ಆನಂದದಾಯಕವಾಗಿಸುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ತಿಳಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಶೇರ್ ಮಾಡಿರುವ ಈ ವಿಡಿಯೋವನ್ನು ವೀಕ್ಷಿಸಿದ ರಿಷಭ್ ಪಂತ್ ಎಮೋಜಿಯ ಮೂಲಕ ಪ್ರತಿಕ್ರಿಯಿಸಿದ್ದಾರೆ.