ಬೆಳಗಾವಿ : ಆಕಸ್ಮಿಕವಾಗಿ ಗುಂಡು ತಗುಲಿ ನೌಕಾ ನೆಲೆಯ ಯೋಧ ಸಾವನ್ನಪ್ಪಿದ್ದಾರೆ. ಪ್ರವೀಣ ಸುಭಾಷ್ ಖಾನಗೌಡರ ಮೃತ ಯೋಧರಾಗಿದ್ದು, ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಸಾಯುವುದಕ್ಕೂ ಒಂದು ಗಂಟೆಗೆ ಮುನ್ನ ತಾಯಿಯ ಜೊತೆ ಮಾತನಾಡಿದ್ದು, ಇದೀಗ ಮಗನ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬ ಕಣ್ಣೀರಿಡುತ್ತಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಯೋಧ ಪ್ರವೀಣ್ ಚೆನ್ನೈನ ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದರು. 2020ರ ಫೆ.12 ರಂದು ನೌಕಾ ನೆಲೆ ಸೇರಿದ್ದರು. ಕಾಕತಾಳಿ ಎಂಬಂತೆ ಅದೇ ದಿನಾಂಕದಂದು ಇಹಲೋಕ ತ್ಯಜಿಸಿದ್ದಾರೆ.
ಕಲ್ಲೋಳಿಗೆ ಪಾರ್ಥಿವ ಶರೀರ ಬರುತ್ತಿದ್ದಂತೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.