ಬೆಂಗಳೂರು:- 02 ಜನವರಿ 2025: ಸ್ಮಾರ್ಟ್ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್ ಸಿಟಿ (ಬೆಂಗಳೂರು ಹೊರತುಪಡಿಸಿ) ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಸಂಪೂರ್ಣ ತನಿಖೆಗೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ. ಎಸ್. ಸುರೇಶ (ಬೈರತಿ) ಸೂಚಿಸಿದ್ದಾರೆ. ಸ್ಮಾರ್ಟ್ ಸಿಟಿ ಅಭಿಯಾನದಡಿ ರಾಜ್ಯ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಬೈರತಿ ಸುರೇಶ ರವರು ಇಂದು ವಿಧಾನಸೌಧದ ಕಚೇರಿಯಲ್ಲಿ ನಡೆಸಿದರು.
ಸ್ಮಾರ್ಟ್ ಸಿಟಿ ಅಭಿಯಾನ ಶೂರುವಾದಗಿನಿಂದ ಇಲ್ಲಿಯವರೆಗೂ ರಾಜ್ಯದ 7 ಸ್ಮಾರ್ಟ್ ಸಿಟಿಗಳಲ್ಲಿ ರೂ. 6415.51 ಕೋಟಿಗಳ ವೆಚ್ಚದ ಕಾಮಗಾರಿಗಳು ನಡೆದಿದ್ದು, ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ಅಷ್ಟೊಂದು ತೃಪ್ತಿದಾಯಕವಾಗಿಲ್ಲವೆಂದು ತಿಳಿದು ಬಂದ ಕಾರಣ ಸಚಿವ ಬೈರತಿ ಸುರೇಶ ರವರು ಬೆಂಗಳೂರು ಹೊರತುಪಡಿಸಿ (ರೂ. 877.82 ಕೋಟಿ ರೂಪಾಯಿಗಳ ಕಾಮಗಾರಿ ಬೆಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಪೂರ್ಣಗೊಂಡಿದ್ದು) ಇತರೆ 6 ಸ್ಮಾರ್ಟ್ ಸಿಟಿಗಳ ಯೋಜನೆಗಳ ಬಗ್ಗೆ ಸ್ವತಂತ್ರ ಸಂಸ್ಥೆ ಒಳಗೊಂಡಂತೆ ಸಮಿತಿ ರಚಿಸಿ ತನಿಖೆ ನಡೆಸಿ 3 ತಿಂಗಳ ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಸಚಿವ ಬೈರತಿ ಸುರೇಶ ರವರು ಸೂಚಿಸಿದರು.
ಹಲಸು ಕೃಷಿ ಮಾಡಿ ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ! ವಿಧಾನಗಳೇನು.? ಇಲ್ಲಿದೆ ಮಾಹಿತಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ನಡೆದಿರುವ ಕಾಮಗಾರಿಗಳಲ್ಲಿ ಬಹುತೇಕ ರಸ್ತೆ ನಿರ್ಮಾಣ, ಒಳಚರಂಡಿ, ಉದ್ಯಾನವನಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಗಳಿಗೆ ಅನುದಾನವನ್ನು ವೆಚ್ಚ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ಬೈರತಿ ಸುರೇಶ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲು ಅನುದಾನ ಇದಾಗಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ಸ್ಮಾರ್ಟ್ ಶಾಲೆಗಳು, ಆಸ್ಪತ್ರೆ, ಗ್ರಂಥಾಲಯ, ಬಸ್ ನಿಲ್ದಾಣ ಸೇರಿದಂತೆ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿತ್ತು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಅಭಿಯಾನದ ಅಡಿಯಲ್ಲಿ ನಡೆದಿರುವ ಕಾಮಗಾರಿಗಳು ಸರ್ಕಾರದ ಆಸ್ತಿಗಳನ್ನು ವೃದ್ಧಿಸುವಂತೆ ಇರಬೇಕೆ ಹೊರತು ರಸ್ತೆ ನಿರ್ಮಾಣ, ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಬಳಸಿರುವುದು ಸರಿಯಾದ ಮಾರ್ಗವಲ್ಲವೆಂದು 6 ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಿದರು.
ಪ್ರತಿ ಸ್ಮಾರ್ಟ್ ಸಿಟಿಗೂ ಅಂದಾಜು ರೂ. 990 ಕೋಟಿಗಳ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಶೈಕ್ಷಣಿಕ ಶೇ. 2 ರಷ್ಟು, ಇಂಧನ ಶೇ. 8 ರಷ್ಟು, ಆರೋಗ್ಯ ಶೇ. 2 ರಷ್ಟು, ಮಾಹಿತಿ ತಂತ್ರಜ್ಞಾನಕ್ಕೆ ಶೇ. 8 ರಷ್ಟು ಒಟ್ಟಾರೆಯಾಗಿ ಶೇ. 20 ರಷ್ಟು ಅನುದಾನವನ್ನು ಕೆರೆ ಮತ್ತು ಉದ್ಯಾನವನ ಶೇ. 9 ರಷ್ಟು, ಮಾರುಕಟ್ಟೆ ಶೇ. 5 ರಷ್ಟು, ರಸ್ತೆ ನಿರ್ಮಾಣ ಶೇ. 36 ರಷ್ಟು, ಕ್ರೀಡಾ ವಲಯಕ್ಕೆ ಶೇ. 5 ರಷ್ಟು, ಸಾರಿಗೆ ವ್ಯವಸ್ಥೆಗೆ ಶೇ. 8 ರಷ್ಟು, ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶೇ. 18 ರಷ್ಟು ಅನುದಾನ ಹಂಚಿಕೆಯಾಗಿದ್ದು, ಈ ವಲಯಗಳಲ್ಲಿ ನಡೆದಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಅವುಗಳಲ್ಲಿ ಕೆಲವು ಸಮರ್ಪಕವಾಗಿ ನಡೆದಿಲ್ಲ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಗಮನಕ್ಕೆ ಬಂತು. ಈಗಾಗೀ ಒಟ್ಟಾರೆಯಾಗಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸ ಬೇಕಾಗುತ್ತದೆ ಎಂದು ಸಚಿವ ಬೈರತಿ ಸುರೇಶ ರವರು ಸಭೆಯಲ್ಲಿ ತಿಳಿಸಿದರು.