ಪಾಕಿಸ್ತಾನ: ಪಾಕಿಸ್ತಾನ ಸರಕಾರ ಪ್ಯಾಕ್ ಮಾಡಿದ ಹಾಲಿನ ಮೇಲೆ ಶೇ. 18ರಷ್ಟು ತೆರಿಗೆ ವಿಧಿಸಿದೆ. ಇದರಿಂದ ದೇಶದಲ್ಲಿ ಹಾಲಿನ ದರ ಭಾರೀ ಏರಿಕೆ ಕಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಅಭಿವೃದ್ಧಿ ಹೊಂದಿದ ದೇಶಗಳಾದ ಫ್ರಾನ್ಸ್, ನೆದರ್ಲೆಂಡ್, ಆಸ್ಟ್ರೇಲಿಯಾದಲ್ಲಿನ ದರವನ್ನೇ ಮೀರಿಸಿದೆ. ಪಾಕಿಸ್ತಾನ ಸರಕಾರ ಹಾಲಿನ ಮೇಲಿನ ತೆರಿಗೆ ಹೆಚ್ಚಿಸಿದ್ದರಿಂದ ದೇಶದಲ್ಲಿ ಹಾಲಿನ ದರ ಬರೋಬ್ಬರಿ ಶೇ. 25ರಷ್ಟು ಏರಿಕೆ ಕಂಡಿದೆ.
ಸದ್ಯ ಪಾಕಿಸ್ತಾನದ ವಾಣಿಜ್ಯ ರಾಜಧಾನಿ, ಅತಿ ದೊಡ್ಡ ಪಟ್ಟಣ ಕರಾಚಿಯಲ್ಲಿ ಅಧಿಕ ಉಷ್ಣಾಂಶದಲ್ಲಿ ಕಾಯಿಸಿ ಸಂಸ್ಕರಿಸಿರುವ ಹಾಲಿನ ದರ ಪ್ರತಿ ಲೀಟರ್ಗೆ 370 ಪಾಕಿಸ್ತಾನ ರೂಪಾಯಿಗೆ ತಲುಪಿದೆ. ಅಂದರೆ ಡಾಲರ್ ಲೆಕ್ಕದಲ್ಲಿ 1.33 ಡಾಲರ್; ಭಾರತೀಯ ರೂಪಾಯಿ ಲೆಕ್ಕದಲ್ಲಿ 111 ರೂಪಾಯಿ. ಹೋಲಿಕೆಗೆ ನೋಡುವುದಾದರೆ ನೆದರ್ಲೆಂಡ್ ರಾಜಧಾನಿ ಆಮ್ಸ್ಟರ್ಡ್ಯಾಮ್ನಲ್ಲಿ ಲೀಟರ್ ಹಾಲಿಗೆ 1.29 ಡಾಲರ್ ದರವಿದ್ದರೆ, ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ 1.23 ಡಾಲರ್, ಮೆಲ್ಬರ್ನ್ನಲ್ಲಿ 1.08 ಡಾಲರ್ ಇದೆ. ಇನ್ನು ಕರ್ನಾಟಕದಲ್ಲಿ ಲೀಟರ್ ಹಾಲಿಗೆ 44 ರಿಂದ 50 ರೂಪಾಯಿ ದರ ಇದೆ.
ಹಾಲಿನ ದರ ಏರಿಕೆಯಿಂದ ಪಾಕಿಸ್ತಾನದ ಬಡವರಲ್ಲಿ ಅಪೌಷ್ಟಿಕತೆ ಸಮಸ್ಯೆ ಮತ್ತಷ್ಟು ಹೆಚ್ಚುವ ಆತಂಕ ಸೃಷ್ಟಿಯಾಗಿದೆ. ದೇಶದ ದೊಡ್ಡ ಪ್ರಮಾಣದ ಜನ ಬಡತನ ರೇಖೆಗಿಂತ ಕೆಳಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 60ರಷ್ಟು ಮಕ್ಕಳಿಗೆ ರಕ್ತ ಹೀನತೆಯು ಕಾಡುತ್ತಿದ್ದರೆ, ಶೇ. 40ರಷ್ಟು ಮಕ್ಕಳಲ್ಲಿ ಅಪೌಷ್ಠಿಕತೆಯ ಸಮಸ್ಯೆ ಇದೆ.
ಹಣದುಬ್ಬರ ಮತ್ತಷ್ಟು ಏರಿಕೆ
ಪಾಕಿಸ್ತಾನದ ಬಜೆಟ್ನಲ್ಲಿ ಒಟ್ಟಾರೆ ತೆರಿಗೆ ಪ್ರಮಾಣವನ್ನು ಶೇ. 40ರಷ್ಟು ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಮತ್ತೆ ಹಣಕಾಸು ಸಹಕಾರ ಪಡೆಯುವ ನಿಟ್ಟಿನಲ್ಲಿ ಅಗತ್ಯವಿರುವ ನಿಯಮಾವಳಿಗೆ ತಕ್ಕಂತೆ ಈ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಕಿಸ್ತಾನ ತನ್ನ ಪ್ರಯತ್ನವನ್ನು ಮುಂದುವರಿಸಿದೆ.