ಬೆಂಗಳೂರು:- ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರದ ಕುಮ್ಮಕ್ಕು ಇದೆ. ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಇದು ಇಲ್ಲಿನವರೆಗೆ ಮುಂದುವರೆಯುತ್ತಿರಲಿಲ್ಲ. ಎರಡೂ ಕಡೆಯಿಂದ ವಸೂಲಿ ಮಾಡಲು ಪೊಲೀಸರಿಗೆ ಇದು ದಂಧೆಯಾಗಿತ್ತು ಎಂದು ಹೇಳಿದ್ದಾರೆ.
ಅನೇಕರ ಮಾರಣಹೋಮ ಆದ ಬಳಿಕ ಸರ್ಕಾರ ಎಚ್ಚೆತ್ತು ಇವತ್ತು ಒಂದು ಸಭೆ ಕರೆದು ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಚರ್ಚೆ ನಡೆಸಿದೆ. ಹೊಸ ಕಾನೂನು ಜಾರಿಗೆ ತಂದು, ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುವುದಾಗಿ ತಿಳಿಸಿದೆ ಎಂದಿದ್ದಾರೆ
ಮೈಕ್ರೋ ಫೈನಾನ್ಸ್ಗಳ ಸಮಸ್ಯೆ ಕುರಿತು ಅನೇಕ ಮುಖಂಡರು ಗಮನ ಸೆಳೆದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಕೊನೆಗೂ ಇವತ್ತು ಒಂದು ತೀರ್ಮಾನಕ್ಕೆ ಬಂದಿದೆ. ಫೈನಾನ್ಸ್ ವಸೂಲಿಗೆ ತೊಂದರೆ ಕೊಟ್ಟರೆ, ಗೂಂಡಾಗಳನ್ನು ಕಳುಹಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ. ಕಾಂಗ್ರೆಸ್ ಸರ್ಕಾರದ ಹಿತದೃಷ್ಟಿಯಿಂದ ಅಲ್ಲ ಎಂದಿದ್ದಾರೆ.