ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಕಾಲ್ತುಳಿತ ಸಂಬಂವಿಸಿ ಮಹಿಳೆ ಮೃತಪಟ್ಟ ಬಳಿಕ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಈ ಮಧ್ಯೆ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗದ ವಿರುದ್ಧ ನಿಂತಿದ್ದು ಉದ್ದೇಶಪೂರ್ವಕವಾಗಿ ಸಮಸ್ಯೆ ಕೊಡುತ್ತಿದೆ ಎಂದು ಹೇಳಲಾಗುತ್ತಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ, ವಿನಯಪೂರ್ವಕವಾಗಿಯೇ ತೆಲಂಗಾಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಿರಂಜೀವಿ, ರವಿತೇಜ ಒಟ್ಟಿಗೆ ನಟಿಸಿದ್ದ ‘ವಾಲ್ತೇರು ವೀರಯ್ಯ’ ಸಿನಿಮಾದ 200ನೇ ದಿನದ ಸಂಭ್ರಮಾಚರಣೆ ನಿನ್ನೆ ನಡೆದಿದ್ದು ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ತೆಲಂಗಾಣ ಸರ್ಕಾರಕ್ಕೆ ಚಿರಂಜೀವಿ ಕುಟುಕಿದ್ದಾರೆ.
‘ಚಿತ್ರರಂಗದವರ ಸಂಭಾವನೆ, ಸಿನಿಮಾ ಕಲೆಕ್ಷನ್ಗಳನ್ನು ಇವರು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅದನ್ನು ಕೇಳಿದಾಗ ಇವರಿಗೆ ಬೇರೆ ಕೆಲಸ ಇಲ್ಲವಾ ಎನಿಸುತ್ತದೆ’ ಎಂದಿದ್ದಾರೆ. ಮುಂದುವರೆದು, ‘ಸಿನಿಮಾಗಳು ಚೆನ್ನಾಗಿ ವ್ಯವಹಾರ ಮಾಡುತ್ತಿವೆ ಆದ್ದರಿಂದ ಹೆಚ್ಚು ಹೆಚ್ಚು ಸಿನಿಮಾ ಮಾಡುತ್ತಿದ್ದೇವೆ. ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದೇವೆ. ಹೆಚ್ಚು ಸಿನಿಮಾ ಮಾಡಲು ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಸಹ ಕೊಡುತ್ತಿದ್ದೇವೆ’ ಎಂದಿದ್ದಾರೆ ಚಿರಂಜೀವಿ.
‘ಸಿನಿಮಾದವರು ದುಡ್ಡು ಮಾಡಿಬಿಡುತ್ತಿದ್ದಾರೆ ಎಂಬುದನ್ನೇ ಏನೋ ದೊಡ್ಡ ಸಮಸ್ಯೆಯ ರೀತಿಯಲ್ಲಿ ನೀವು ಚರ್ಚೆಗಳ ಮೇಲೆ ಚರ್ಚೆಗಳನ್ನು ಮಾಡುತ್ತಿದ್ದೀರಿ. ಇದಕ್ಕಿಂತಲೂ ದೊಡ್ಡ ಸಮಸ್ಯೆಯೇ ಇಲ್ಲ, ಇದೇ ದೊಡ್ಡ ಸಮಸ್ಯೆ ಎಂಬ ರೀತಿಯಲ್ಲಿ ನೀವು ವರ್ತಿಸುತ್ತಿದ್ದೀರಿ. ಇದು ಬಹಳ ದುರದೃಷ್ಟ. ಸಿನಿಮಾ ಪಾಡಿಗೆ ಸಿನಿಮಾವನ್ನು ಬಿಟ್ಟುಬಿಡಿ. ನಿಮ್ಮ ಕೈಯಲ್ಲಿ ಸಾಧ್ಯವಾದರೆ ಬೆಂಬಲ ನೀಡಿ. ಇಲ್ಲವಾದರೆ ಬಿಡಿ. ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂಬ ಕಾರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿದ್ದೇವೆ. ಖರ್ಚು ಮಾಡಿದ್ದೀವಾದ್ದರಿಂದ ಅದರಿಂದ ಲಾಭ ಬರಲೆಂದು ನಿರೀಕ್ಷೆ ಮಾಡುತ್ತೀವಿ. ಸಾಧ್ಯವಾದರೆ ನಮಗೆ ಸಹಕರಿಸಿ, ಆದರೆ ನಾವು ಮಾಡುತ್ತಿರುವುದು ದೊಡ್ಡ ತಪ್ಪು ಎಂದು ದೇಶವ್ಯಾಪ್ತಿಯಾಗಿ ಬಿಂಬಿಸುವ ಪ್ರಯತ್ನ ಮಾಡಬೇಡಿ’ ಎಂದು ಚಿರು ಮನವಿ ಮಾಡಿದ್ದಾರೆ.
ಮುಂದುವರೆದು, ‘ರಾಜಕೀಯ ನಾಯಕರು, ರಾಜಕೀಯ ಪಕ್ಷಗಳಿಗೆ ಹೋಲಿಸಿಕೊಂಡರೆ ಸಿನಿಮಾ ಬಹಳ ಚಿಕ್ಕದು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಏಕೆ ಬಿಡುತ್ತೀರಿ. ಮಾತನಾಡಲು ಹಲವಾರು ಸಮಸ್ಯೆಗಳಿವೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಿಸುವ ವಿಚಾರ, ನಿಂತುಹೋಗಿರುವ ಪ್ರಾಜೆಕ್ಟ್ಗಳು, ಬಡವರ ಹೊಟ್ಟೆ ತುಂಬಿಸುವ ಯೋಜನೆಗಳು, ಶಿಕ್ಷಣವನ್ನು ಉತ್ತಮ ಪಡಿಸುವ ಯೋಜನೆಗಳು, ರಾಜ್ಯದ ಯುವಕರಿಗೆ ನೌಕರಿ ಇಂಥಹಾ ವಿಷಯಗಳ ಬಗ್ಗೆ ಮಾತನಾಡಿ, ಬದಲಾವಣೆ ತನ್ನಿ ಎಂದು ನಾನು ಸವಿನಯವಾಗಿ ಕೋರಿಕೊಳ್ಳುತ್ತೇನೆ’ ಎಂದಿದ್ದಾರೆ ಮೆಗಾಸ್ಟಾರ್ ಚಿರಂಜೀವಿ.